ಕಳಪೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ
ಚಿಂತಾಮಣಿ: ಉಪ್ಪಾರಪೇಟೆ ಕಡೆಯಿಂದ ರಾಯಪ್ಪಲ್ಲಿ ಹಾಗೂ ಬಿಂಗಾನಹಳ್ಳಿ ಮಾರ್ಗದ ರೇಲ್ವೆ ಅಂಡರ್ಪಾಸ್ ಕಾಮಗಾರಿ ಕಳಪೆಯಿಂದ ಕೂಡಿದ ಪರಿಣಾಮ ರೈಲು ಓಡಾಡುವ ಮುನ್ನವೇ ರಸ್ತೆಗಳು ಹಾಳಾಗಿರುವುದಾಗಿ ಈ ಮಾರ್ಗವಾಗಿ ಸಂಚರಿಸುವ ಗ್ರಾಮಸ್ಥರು ಆರೋಪಿಸಿದ್ದಾರೆ.
ಸಂಚಾರಕ್ಕೂ ಮುನ್ನವೇ ಬಿರುಕು: ತಾಲೂಕಿನ ಉಪ್ಪಾರಪೇಟೆ ಮುಖಾಂತರ ರಾಯಪ್ಪಲ್ಲಿ ಹಾಗೂ ಬಿಂಗಾನಹಳ್ಳಿ ಗ್ರಾಮಗಳಿಗೆ ಹೋಗಿ ಬರಲು ರೇಲ್ವೆ ಇಲಾಖೆ ಅಂಡರ್ಪಾಸ್ ಮಾರ್ಗ ಅನುಸರಿಸುವುದು ಸರಿಯಷ್ಟೆ. ಆದರೆ, ಇಲ್ಲಿನ ಅಂಡರ್ಪಾಸ್ ರಸ್ತೆ ಅಥವಾ ಕಾಮಗಾರಿ ನೋಡಿದರೆ, ರೈಲು ಓಡಾಡುವುದಕ್ಕೂ ಮುನ್ನವೇ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಯದೇ ಇರುವುದರಿಂದ ರೈತರಿಗೆ ಹೋಗಿ ಬರಲು ತೊಂದರೆಯಾಗಿದೆ. ಎದುರು ಬದರು ಬರುವ ವಾಹನಗಳಿಗೆ ಯಾವುದೇ ರಸ್ತೆ ತಡೆಗೋಡೆಗಳು ನಿರ್ಮಾಣಗೊಳ್ಳದೆ ಹಾಗೂ ಅಂಡರ್ಪಾಸ್ ಬಳಿ ಅಗಲ ರಸ್ತೆಯಿಲ್ಲದೆ ಕತ್ತಲಿನಿಂದ ಕೂಡಿದ ಪರಿಣಾಮ, ಜನರಿಗೆ ಸುಗಮವಾಗಿ ಸಂಚರಿಸಲು ತುಂಬಾ ತೊಂದರೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ರೈಲ್ವೆ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗಳಿಂದ ಕೂಡಿರುವ ಅಂಡರ್ಪಾಸ್ ಕಾಮಗಾರಿಯನ್ನು ಸರಿಪಡಿಸಿ ಸುಗಮವಾಗಿ ಸಂಚರಿಸಲು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಭಾಗದ ಸುತ್ತಮುತ್ತಲಿನ ನೂರಾರು ಜನರು ಒತ್ತಾಯಿಸಿದ್ದಾರೆ.