ದರೋಡೆಗೆ ಹೊಂಚು; ಐವರ ಬಂಧನ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಮಾಡಲು ಯತ್ನಿಸಿ ಸಿಕ್ಕಿ ಬಿದ್ದು ಇದೀಗ ಪೊಲೀಸರ ಅತಿಥಿಗಳಾಗಿರುವ ಆರೋಪಿಗಳನ್ನು ಬೆಂಗಳೂರು ಮೂಲದ ರಂಜಿತ್ (17 ವರ್ಷ), ಆಕಾಶ್ (17 ವರ್ಷ), ರುದ್ರೇಶ್ (22 ವರ್ಷ), ಜೈಶ್ರೀರಾಮ್ (23 ವರ್ಷ), ಗಿರೀಶ್ (24 ವರ್ಷ) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ.
ಘಟನೆ ಹಿನ್ನೆಲೆ: ಎರಡು ಪಲ್ಸಾರ್ ಬೈಕ್ನಲ್ಲಿ ಬಂದ ಆರೋಪಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7 ರ ಬೀಚಗಾನಹಳ್ಳಿ ಕ್ರಾಸ್ನ್ ರಸ್ತೆ ಬದಿಯ ಬಳಿ ನಿಂತುಕೊಂಡಿದ್ದ ನಾರಾಯಣಮೂರ್ತಿ ಸೇರಿದಂತೆ ಮತ್ತಿತರರಿಗೆ ಲಾಂಗು ಮಚ್ಚು ತೋರಿಸಿ ನಿಮ್ಮ ಬಳಿ ಇರುವ ಹಣವನ್ನು ಕೊಡಿ, ಇಲ್ಲದಿದ್ದಲ್ಲಿ ಕೊಂದು ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಅವರಿಂದ ಹಣ ಮತ್ತು ಮೊಬೈಲ್, ವಾಚುಗಳನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಪೊಲೀಸರಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಕಾರ್ಯ ಪ್ರವೃತ್ತರಾದ ಗುಡಿಬಂಡೆ ಪೊಲೀಸರು ಚಿಕ್ಕಬಳ್ಳಾಪುರ ತಾಲೂಕಿನ ಅಡ್ಡಗಲ್ ಬಳಿ ಆರೋಪಿಗಳನ್ನು ಹಿಡಿದುಕೊಂಡು ಬಂಧಿಸಿದ್ದಾರೆ. ಆರೋಪಿಗಳಿಂದ 19,000 ನಗದು,6 ಮೊಬೈಲ್, ವಾಚ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಲು ಯತ್ನಿಸಿದ ಐವರನ್ನು ಪೊಲೀಸರು ಚಾಕಚಕ್ಯತೆಯಿಂದ ಬಂಧಿಸಿದ್ದು ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ. ಬಂಧಿತರನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿಸಿರುವ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರ ಕಾರ್ಯ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.