ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ದೇಗುಲ ಭೇಟಿಯಿಂದ ನೆಮ್ಮದಿ, ಸದ್ಭಾವನೆ ಪ್ರಾಪ್ತಿ'

Rashmi Kasaragodu
Updated On : 10 Aug 2013, 11:59 am

ಚಿಕ್ಕಬಳ್ಳಾಪುರ: ದೇವಾಲಯಗಳಿಗೆ ಹೆಚ್ಚೆಚ್ಚು ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜತೆಗೆ ಸದ್ಭಾವನೆಗಳು ಬೆಳೆಯುತ್ತವೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ತಾಲೂಕಿನ ಶ್ರೀ ಕ್ಷೇತ್ರ ಶ್ರೀನಿವಾಸ ಸಾಗರದ ವೆಂಕಟರಮಣಸ್ವಾಮಿ ಆಲಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮತ್ತು ವೆಂಕಟಮರಮಣಸ್ವಾಮಿ ದೇವಾಲಯ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಶಿಥಿಲಾವಸ್ಥೆಯಲ್ಲಿರುವ ಪರಮೇಶ್ವರಸ್ವಾಮಿ ದೇವಾಲಯದ ಪುನರ್ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದು ಶನಿವಾರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ತಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಸ್ಮಾರಕಗಳನ್ನು ಸಂರಕ್ಷಿಸುವ ಜವಾಬ್ದಾರಿಯು ಪ್ರತಿಯೊಬ್ಬರ ಮೇಲಿದೆ. ಈ ಮೂಲಕ ನಮ್ಮ ಸನಾತನ ಪರಂಪರೆ, ಇತಿಹಾಸವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇದರಿಂದ ಹಿರಿಯರಿಗೆ ಗೌರವಿಸುವಂತಾಗುವುದಲ್ಲದೇ ಮುಂದಿನ ಪೀಳಿಗೆಗಾಗಿ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಪ್ರಾಚೀನ ಕಾಲದ ಸ್ಮಾರಕಗಳು ನಮ್ಮ ದೇಶದ ಸಂಪತ್ತು. ಅವುಗಳು ಇರುವ ಮೂಲ ವಿನ್ಯಾಸವನ್ನು ಕಾಪಾಡಿಕೊಂಡು ಜೀರ್ಣೋದ್ಧಾರ ಮಾಡಿದರೆ ಅದರ ಪರಿಕಲ್ಪನೆ ಉಳಿಯುತ್ತದೆ. ಹಾಗೆಯೇ ಗತಕಾಲದ ವೈಭವವನ್ನು ನೆನಪಿಸಲು ಸಾಧ್ಯವಾಗುತ್ತ ದೆ ಎಂದ ಅವರು, ಪಲ್ಲವರ ಕಾಲದಲ್ಲಿ ನಿರ್ಮಿಸಲಾಗಿರುವ ಶ್ರೀನಿವಾಸ ಸಾಗರದ ಶ್ರೀ ವೆಂಕಟರಮಣಸ್ವಾಮಿ ದೇವಾಲಯವು ವಿಶೇಷತೆಯನ್ನು ಹೊಂದಿದ್ದು ಈ ದೇವಾಲಯದ ಹಿಂದಿನ ಮೂಲ ವಿನ್ಯಾಸವನ್ನು ಕಾಪಾಡಿಕೊಂಡು ಜೀರ್ಣೋದ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಯಾವುದೇ ದೇವಾಲಯಗಳು ಪುನರ್ಪ್ರತಿಷ್ಠಾಪಿಸಬೇಕಾದರೆ ಜೀರ್ಣೋದ್ದಾರ ಎಂಬುದು ಕೇವಲ ವೈಭವೀಕರಣವಾಗಬಾರದು. ದೇವಾಲಯದ ವಾಸ್ತುಶಿಲ್ಪ ಶೈಲಿಗೆ ಅನುಗುಣವಾಗಿ ಅವುಗಳ ಮೂಲ ಸ್ವರೂಪವನ್ನು ಕಾಪಾಡಿಕೊಂಡು ಅರ್ಥಪೂರ್ಣವಾಗಿ ಸಂರಕ್ಷಣೆಯಾಗಬೇಕೆಂದು ತಿಳಿಸಿದರು.
ತಮ್ಮಲ್ಲಿ ಎಷ್ಟೆ ಕಷ್ಟ ಕಾರ್ಪಣ್ಯಗಳಿದ್ದರೂ ದೇವಾಲಯಗಳಿಗೆ ಒಮ್ಮೆ ಭೇಟಿ ಕೊಟ್ಟರೆ ಆ ದೇವಾಲಯಗಳು ಬದುಕಿಗೆ ಹೊಸ ಸಂದೇಶಗಳನ್ನು ನೀಡುತ್ತವೆ. ಯಾವುದೇ ಒಬ್ಬ ವ್ಯಕ್ತಿ ದೇವಾಲಯಗಳಿಗೆ ತೆರಳಿದರೆ ಆ ವ್ಯಕ್ತಿಯಲ್ಲಿ ಒಳ್ಳೆಯ ಸದ್ಭಾವನೆಗಳು ಮೂಡುತ್ತವೆ. ಇದು  ಮಾತ್ರವಲ್ಲ, ಅವರಲ್ಲಿ ಸಂಸ್ಕಾರ ಸಹ ಮೂಡುತ್ತದೆ ಎಂದರು.
ರಾಜ್ಯದಲ್ಲಿ ಪ್ರಾಚೀನ ಇತಿಹಾಸ, ಸಂಸ್ಕೃತಿ ಶಿಲ್ಪಕಲಾ ಶ್ರೀಮಂತಿಕೆಯ ಸೌಂದರ್ಯವನ್ನು ಹೊಂದಿರುವ ಅಸಂಖ್ಯಾತ ಶಿಲಾದೇವಾಲಯಗಳು ನೈಸರ್ಗಿಕ ಆಘಾತ ಹಾಗೂ ಆರ್ಥಿಕ ಕೊರತೆಯಿಂದಾಗಿ ಒಂದೆಡೆ ನಶಿಸಿ ಕಣ್ಮರೆಯಾಗುತ್ತಿರುವುದು ದುರಂತವೇ ಸರಿ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕೆಲ ಸಂಘ ಸಂಸ್ಥೆ ಹಾಗೂ ದಾನಿಗಳು ವಿವಿಧೆಡೆ ನೆರವಿನಿಂದ ಸಹಾಯವನ್ನು ಪಡೆಯುವ ಕೆಲವರು ಪ್ರಾಚೀನ ಕಾಲದ ಕಟ್ಟಡಗಳ ಮೂಲ ಸ್ವರೂಪ, ವಾಸ್ತುಶಿಲ್ಪಶೈಲಿ, ಸಾಂಸ್ಕೃತಿಕ ಮಹತ್ವದ ಕಡೆಗೆ ಎಳ್ಳಷ್ಟು ಗಮನ ಕೊಡದಿರುವುದು ಸಹಾ ಸಾಧುವಲ್ಲ ಎಂದರು.
ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ನ ಕಾರ್ಯವಿಧಾನವನ್ನು ಗಮನಹರಿಸಿರುವ ರಾಜ್ಯ ಸರ್ಕಾರವು 2002-03ನೇ ಸಾಲಿನಿಂದ ಈ ಟ್ರಸ್ಟ್ನ್ನು  ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸರ್ಕಾರದ ಸಹಭಾಗಿತ್ವದ ಸಾರ್ವಜನಿಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು ವಾರ್ಷಿಕ ಕ್ರಿಯಾ ಯೋಜನೆಗೆ ಚಾಲನೆಯಿತ್ತಿದೆ. ಆಗಾಗಿ ಕಾಮಗಾರಿಯ ವೆಚ್ಚದಲ್ಲಿ ಶೇ.40ರಷ್ಟು ಸರ್ಕಾರದ ಅನುದಾನವೂ ತಮಗೆ ದೊರೆಯುವಂತಾಗಿದೆ ಎಂದರು.
ಧರ್ಮೋತ್ಥಾನ ಟ್ರಸ್ಟ್ ಇಂದು ರಾಜ್ಯದ 25 ಜಿಲ್ಲೆಗಳಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಕೊಂಡು 173 ಐತಿಹಾಸಿಕ ಹಿನ್ನೆಲೆಯ ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕೈಂಕರ್ಯಗಳನ್ನು ಕೈಗೊಂಡು ಅವುಗಳ ಪೈಕಿ 158 ಕಾಮಗಾರಿಗಳನ್ನು ಪೂರೈಸಿವೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗಾಗಿ ಈ ತನಕ ಒಟ್ಟು 1521 ಲಕ್ಷ ರು. ವೆಚ್ಚವಾಗಿದ್ದು ಜೀರ್ಣೋದ್ಧಾರ ಕಾರ್ಯ ಕೈಗೊಂಡಿರುವ ದೇವಸ್ಥಾನಗಳ ಪೈಕಿ 112 ಕಾಮಗಾರಿಗಳು ರಾಜ್ಯ ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಸಹಭಾಗಿತ್ವದ ಕ್ರಿಯಾಯೋಜನೆಯಡಿ ನಡೆದಿವೆ ಎಂದರು.
ಶ್ರೀ ವೆಂಕಟೇಶ್ವರ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಶ್ರೀನಿವಾಸ ಮೂರ್ತಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ಏನೋ ಒಂದು ರೀತಿಯ ಉಲ್ಲಾಸ ದೊರೆಯುತ್ತದೆ ಎಂದರು.
ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ವಕೀಲೆ ಶಾರದಾಂಬರಾವ್, ಸರೋಜಿನಿನಾಯ್ಡು ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರು. ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಸತ್ಯಪ್ರಭ, ತೇಜಸ್ವಿನಿ, ಸತ್ಯನಾರಾಯಣ, ಜಿ.ಎನ್. ಬಾಬು, ಟ್ರಸ್ಟ್ ಸಂಚಾಲಕ ಎಂ.ಜಯರಾಮ್ ಸೇರಿದಂತೆ ಇನ್ನಿತರ ಪ್ರಮುಖರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement