ಬಂಗಾರಪೇಟೆ ಆದರ್ಶ ಶಾಲೆಗೆ ಸ್ವಂತ ಕಟ್ಟಡಕ್ಕೆ ಭೂಮಿಪೂಜೆ
ಬಂಗಾರಪೇಟೆ: ಪಟ್ಟಣದಲ್ಲಿ ಹಲವು ವರ್ಷಗಳಿಂದ ಆದರ್ಶ ವಿದ್ಯಾಲಯ ಶಾಲೆಗೆ ಸ್ವಂತ ಕಟ್ಟಡದ ಭಾಗ್ಯವಿಲ್ಲದೆ ಕೇವಲ ಮೂರು ಕೊಠಡಿಗಳಲ್ಲಿ ಕಿಷ್ಕಿಂದೆಯಲ್ಲಿ ಮಕ್ಕಳು ಪಾಠಗಳನ್ನು ಆಲಿಸುವಂತಾಗಿತ್ತು. ಮಕ್ಕಳ ಈಗ ನರಳಾಟ ನೋಡಲಾಗದೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ 3.30ಕೋಟಿ ವೆಚ್ಚದಲ್ಲಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ಮಾಡುವ ಮೂಲಕ ಮಕ್ಕಳಲ್ಲಿ ಸಂಸತ ಮೂಡಿಸಿದರು.
ಪಟ್ಟಣದ ಆದರ್ಶ ಶಾಲೆ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿದ್ದರೂ ಸರ್ಕಾರ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ಅನುದಾನ ಸಹ ಒದಗಿಸಿತ್ತು. ಆದರೆ ಸ್ಥಳಾವಕಾಶ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು,ಹಾಲಿ ಶಾಸಕ ನಾರಾಯಣಸ್ವಾಮಿ ಜೂನಿಯರ್ ಕಾಲೇಜು ಬಳಿಯಿರುವ ಸ್ಥಳವನ್ನು ಆದರ್ಶ ಶಾಲೆಗೆ ನಿಗದಿಪಡಿಸಿ ಶನಿವಾರ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದಷ್ಟು ಬೇರಾವ ಕ್ಷೇತ್ರಕ್ಕೂ ಕೊಟ್ಟಿಲ್ಲ. ಆದರೆ ಇಂದು ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿರುವಷ್ಟು ಸಮಸ್ಯೆಗಳು ಬೇರೆ ಕ್ಷೇತ್ರದಲ್ಲಿ ಕಾಣುವುದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಗ್ರಾಮೀಣ ಬಡ ಮಕ್ಕಳನ್ನು ಹಾಗೂ ಬಡತನದಿಂದಾಗಿ ಶಾಲೆಗಳಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗಳತ್ತ ಮುಖ ಮಾಡುವಂತೆ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯ ಪುಸ್ತಕಗಳು ಸೇರಿದಂತೆ ಹತ್ತಾರು ಯೋಜನೆಗಳನ್ನು ರೂಪಿಸಿದೆಯಾದರೂ ಮಕ್ಕಳ ಹಾಜರಾತಿ ಮಾತ್ರ ಅಭಿವೃದ್ಧಿಯಾಗಿಲ್ಲ ಮತ್ತು ಫಲಿತಾಂಶ ಸಹ ಕ್ಷೇತ್ರ ಹಿಂದುಳಿದೆ ಏಕೆ ಎಂದು ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದರು. ಪೋಷಕರು ಕಾನ್ವೆಂಟ್ ಶಾಲೆಗಳ ಕಡೆ ತೋರುವ ಆಸಕ್ತಿಯನ್ನು ಸರ್ಕಾರಿ ಶಾಲೆಗಳತ್ತ ತೋರಿಸಿದರೆ ಸರ್ಕಾರ ಈ ಶಾಲೆಗಳ ಪ್ರಗತಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಲು ಸಾಧ್ಯ ಎಂದು ತಿಳಿಸಿದರು.
ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಬಿಸಿಯೂಟ ಮಾಡಲು ಯೋಗ್ಯವಾದ ಸ್ಥಳವಿಲ್ಲದೆ ಬಿಸಿಲಲ್ಲೆ ತಿನ್ನುವಂತಾಗಿದ್ದು ಇನ್ನು ಮುಂದೆ ಅವರೂ ನೆರಳಲ್ಲಿ ಊಟ ಮಾಡಲು ತಮ್ಮ ಶಾಸಕರ ನಿಧಿಯಿಂದ 10ಲಕ್ಷ ವೆಚ್ಚದಲ್ಲಿ ವರಾಂಡ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.ಅಲ್ಲದೆ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದೇ ಮೂಲಭೂತ ಅನುಕೂಗಳಲ್ಲಿದೆ ಪೋಷಕರಿಂದ ದುಬಾರಿ ಡೋನೇಷನ್ ಪಡೆಯುತ್ತಿರುವುದನ್ನು ಖಂಡಿಸಿ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಗಾವಹಿಸಬೇಕೆಂದು ಸೂಚಿಸಿದರು.
ತಾಪಂ ಅಧ್ಯಕ್ಷ ರೇಣುಕಾಬಾಲಚಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಸದಸ್ಯ ಶಫಿ,ರಂಗರಾಮಯ್ಯ ಬ್ಲಾಕ್ ಅಧ್ಯಕ್ಷ ಮಂಜುನಾಥಗೌಡ, ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ಅಪ್ಪಾಜಿಗೌಡ ಮತ್ತಿತರರು ಇದ್ದರು.