ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಲಿ: ಖರ್ಗೆ

Rashmi Kasaragodu
Updated On : 10 Aug 2013, 11:59 am

ಕ.ಪ್ರ.ವಾರ್ತೆ ಟಿ ಕೆಜಿಎಫ್ ಟಿ ಆ.10
ಚಿನ್ನದ ಗಣಿ ಮುಚ್ಚಿದ ನಂತರ ಕೆಜಿಎಫ್ ಕ್ಷೇತ್ರದ ಲಕ್ಷಾಂತರ ಜನರು ವಿವಿಧ ಕೆಲಸ ಕಾರ್ಯಗಳಿಗಾಗಿ ಕೆಜಿಎಫ್ನಿಂದ ಬೆಂಗಳೂರಿಗೆ ದಿನನಿತ್ಯದ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಭಾಗದ ಜನರ ಹೆಚ್ಚಿನ ಅನುಕೂಲಕ್ಕಾಗಿ ಇದೀಗ ಮಾರಿಕುಪ್ಪಂ ಬೆಂಗಳೂರು ಪುಷ್ಪುಲ್ ಪ್ಯಾಸೆಂಜರ್ ರೈಲಿನ ಪ್ರಾರಂಭದಿಂದ ಕೆಜಿಎಫ್ ಕ್ಷೇತ್ರದ ಜನತೆ ಬೇಡಿಕೆ ಈಡೇರಿಸಿದಂತಾಗಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿನ ಮಾರಿಕುಪ್ಪಂ ರೇಲ್ವೆ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಲಾಗಿದ್ದ ಮಾರಿಕುಪ್ಪಂ-ಬೆಂಗಳೂರು ನೂತನ ಪುಷ್ಪುಲ್ ಪ್ಯಾಸೆಂಜರ್ ರೈಲು ಪ್ರಾರಂಭಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದರು.
ರಾಜ್ಯದಲ್ಲಿ ಅವಶ್ಯಕತೆ ಇರುವ ರೈಲು ಸಂಪರ್ಕ, ಡಬಲ್ ಮತ್ತು ಸಿಂಗಲ್ ಲೈನ್ ಬ್ರಾಡ್ಗೇಜ್ ಲೈನ್ ಸೇರಿದಂತೆ ರಾಜ್ಯದ ಜನತೆಯ ಹಲವು ಬೇಡಿಕೆಗಳ ಬಗ್ಗೆ ಗಮನಹರಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯರು ಸೇರಿದಂತೆ ವಿಭಾಗೀಯ ರೇಲ್ವೆ ಇಲಾಖೆಯ ಅಧಿಕಾರಿಗಳು ಅಗತ್ಯ ಇರುವ ರೇಲ್ವೆ ಅಭಿವೃದ್ಧಿಯ ಕಾಮಗಾರಿಗಳ ಪೂರೈಕೆಗೆ ಹೆಚ್ಚಿನ ಗಮನಹರಿಸಿ ಕೆಲಸ ಮಾಡಬೇಕಾಗಿದೆ. ಈ ಹಿಂದೆ ರೇಲ್ವೆ ರಾಜ್ಯ ಮಂತ್ರಿಗಳಾಗಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ರಾಜ್ಯದಲ್ಲಿ ಮತ್ತು ಕೆಜಿಎಫ್ ಕ್ಷೇತ್ರದಲ್ಲಿ ರೈಲು ಮಾರ್ಗಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಈ ಕ್ಷೇತ್ರದ ಲಕ್ಷಾಂತರ ಜನರ ಅನುಕೂಲಕ್ಕಾಗಿ ಮಾರಿಕುಪ್ಪಂ-ಕುಪ್ಪಂ ಮಾರ್ಗದ ಸರ್ವೆ ಕೆಲಸ ಮುಗಿದಿದೆ. ರಾಜ್ಯ ಸರ್ಕಾರ 6 ಎಕರೆ ಜಮೀನು ಮತ್ತು ಆಂಧ್ರಪ್ರದೇಶದ ಸರ್ಕಾರ 17 ಎಕರೆ ಜಮೀನು ಮಂಜೂರು ಮಾಡಬೇಕಾಗಿದೆ ಎಂದರು.
ಕೋಲಾರ ಚಿಕ್ಕಬಳ್ಳಾಪುರ ರೈಲು ಸಂಪರ್ಕ ಕಲ್ಪಿಸುವ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಉಳಿದಿರು ಕಾಮಗಾರಿ ಪೂರ್ಣಗೊಳ್ಳಲು ಕೆಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ರೇಲ್ವೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಲ್ಲಿ ಮುಂದಿನ 2 ತಿಂಗಳಲ್ಲಿ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದರು.
ದೇಶದಲ್ಲಿ ಶೇ.75ರಷ್ಟು ಬಡ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಯುಪಿಎ ಸರ್ಕಾರ ಹಲವಾರು ಜನಪರ ಯೋಜನೆ ಜಾರಿಗೊಳಿಸಿದೆ. ಇದೀಗ ವಿಶೇಷವಾಗಿ ಮಹಿಳೆಯರು, ಯುವತಿಯರಿಗೆ ತಮ್ಮ ಮುಂದಿನ ಜೀವನ ಉತ್ತಮವಾಗಿ ರೂಪಿಸಿಕೊಳ್ಳಲು ಪ್ರತ್ಯೇಕ ಬ್ಯಾಂಕ್ ತೆರೆಯಲಾಗಿದೆ ಎಂದರು.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಚಿವರಾಗಿ 50 ದಿನಗಳಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾರಿಕುಪ್ಪಂ ಬೆಂಗಳೂರು ನೂತನ ರೈಲಿಗೆ ಚಾಲನೆ ನೀಡಿರುವುದು ಕೆಜಿಎಫ್ ಕ್ಷೇತ್ರದ ಜನತೆಯಲ್ಲಿ ಸಂತಸ ತಂದಿದೆ. ರಾಜ್ಯದಲ್ಲಿ ಹೆಚ್ಚು ರೈಲು ಮಾರ್ಗಗಳು ಮತ್ತು ನೂತನ ರೈಲುಗಳ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂರ್ತಿ ಪ್ರಮಾಣದಲ್ಲಿ ಭೂಮಿಯನ್ನು ನೀಡಲು ತೀರ್ಮಾನ ಕೈಗೊಂಡಿದ್ದಾರೆ. 2001ರಲ್ಲಿ ಚಿನ್ನದ ಗಣಿಯನ್ನು ಮುಚ್ಚಿದ ನಂತರ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕ್ಕಿದ್ದು ಬಿಜಿಎಂಎಲ್ ಪುನರಾರಂಭಕ್ಕೆ ಒತ್ತಾಯಿಸಿ ತಮ್ಮನೊಳಗೊಂಡಂತೆ ಹಲವಾರು ಶಾಸಕರು, ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಪ್ರಮುಖವಾಗಿ ಪತ್ರಕರ್ತ ಸಂಘ ವಿವಿಧ ರೀತಿಯ ಪ್ರತಿಭಟನೆ ಹೋರಾಟಗಳಿಗೆ ಸುಪ್ರೀಂಕೋರ್ಟ್ನ ತೀರ್ಪು ಸಾಕ್ಷಿಯಾಗಿದೆ ಎಂದರು.
ಅತಿ ಶೀಘ್ರದಲ್ಲೇ ಗ್ಲೋಬಲ್ ಟೆಂಡರ್ ರಕೆದು ಚಿನ್ನದ ಗಣಿ ಪುನರಾರಂಭ ಮಾಡಿ ಕಾರ್ಮಿಕರಿಗೆ ಸಿಗಬೇಕಾದ 52 ಕೋಟಿ ಮತ್ತು ಮನೆಗಳನ್ನು ಹಾಗೂ ಕಾರ್ಮಿಕ ಕುಟುಂಬ ವರ್ಗದವರಿಗೆ ಉದ್ಯೋಗವಕಾಶ ದೊರೆಯುತ್ತದೆ. ಅದೇ ರೀತಿ ಕೆಜಿಎಫ್ನಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಕೆಜಿಎಫ್ನಲ್ಲೇ ವಿವಿಧ ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗವಕಾಶ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಗೆ ಎಂದರು.
ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ ಮಾತನಾಡಿ, ಬಂಗಾರಪೇಟೆ ಕೆಜಿಎಫ್ಗೆ ಸಂಬಂಧಿಸಿದಂತೆ ಹಿಂದಿನ ರೇಲ್ವೆ ಸಚಿವರಾಗಿದ್ದಾಗ ಕೆ.ಎಚ್. ಮುನಿಯಪ್ಪ ಅವರು ಪ್ರತಿದಿನ ಬೆಂಗಳೂರಿಗೆ ತೆರಳುವ ಸಾವಿರಾರು ಮಂದಿಗೆ 4 ರೈಲುಗಳ ವ್ಯವಸ್ಥೆಯನ್ನು ಮಾಡಿದ್ದರು. ಕೆಜಿಎಫ್, ಬಂಗಾರಪೇಟೆ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಪುಷ್ಪುಲ್ ರೈಲಿಗೆ ಬದಲು 16 ಬೋಗಿಗಳ ಸ್ವರ್ಣ ಪ್ಯಾಸೆಂಜರ್ ರೈಲುಗಳನ್ನು ಕಲ್ಪಿಸಬೇಕು. ಬಂಗಾರಪೇಟೆ ಕ್ಷೇತ್ರ ಸಾರ್ವಜನಿಕರ 100 ವರ್ಷಗಳ ಕನಸಾಗಿರುವ ಬಂಗಾರಪೇಟೆಯ ರಸ್ತೆ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸಲು ರೇಲ್ವೆ ಇಲಾಖೆ ಸ್ಥಳ ಒದಗಿಸಿಕೊಡಬೇಕು ಎಂದು ಕೋರಿದರು.
ಕೆಜಿಎಫ್ ಶಾಸಕಿ ವೈ.ರಾಮಕ್ಕ ಮಾತನಾಡಿ, ಕೆಜಿಎಫ್ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಮಾರಿಕುಪ್ಪಂ ಬೆಂಗಳೂರು ರೈಲು ಬಿಡುಗಡೆಗೆ ಅಭಿನಂದನೆ ಸಲ್ಲಿಸಿದರು. ಕೆಜಿಎಫ್ನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಸಮಸ್ಯೆಗಳ ಈಡೇರಿಕೆಗೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಡಿ.ಎಸ್.ವೀರಯ್ಯ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಉಪಾಧ್ಯಕ್ಷ ಡಿ.ಜಯಪಾಲ್, ಎಐಸಿಸಿ ಸದಸ್ಯ ಎನ್.ಶ್ರೀನಿವಾಸ್, ಜಿಪಂ ಸದಸ್ಯರಾದ ಆ.ಮು.ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣರೆಡ್ಡಿ, ಶ್ರೀಧರ್ರಾಜ್, ರೇಲ್ವೆ ಸಮಿತಿ ಸದಸ್ಯರಾದ ಪ್ರೇಮಚಂದ್ಜೈನ್, ಜಯದೇವ್, ಕಿಶೋರ್ಕುಮಾರ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಜಿ.ಎಸ್. ಕಾರ್ತಿಕ್, ವಿಭಾಗೀಯ ರೇಲ್ವೆ ಇಲಾಖೆಯ ಅಧಿಕಾರಿಗಳಾದ ಮಿಶ್ರಾಜೀ ಹಾಜರಿದ್ದರು.
ಮುಖಂಡರಾದ ಗುರುರೆಡ್ಡಿ, ಮಂಜುನಾಥ್, ಚಂದ್ರಾರೆಡ್ಡಿ, ರಾಮಪ್ರಸಾದ್, ಚಲವಾದಿ ನಾರಾಯಣಸ್ವಾಮಿ, ನಗರಸಭೆ ಆಯುಕ್ತ ವಿ.ಬಾಲಚಂದರ್, ಪೊಲೀಸ್ ರಕ್ಷಣಾಧಿಕಾರಿ ಡಾ.ರೋಹಿಣಿ ಕಟೋಚ್ ಸಫೆಟ್ ಸೇರಿದಂತೆ ಇತರೆ ಮುಂಖಂಡರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement