ಲಕ್ಷ್ಮಿವೆಂಕಟೇಶ್ವರ ದರ್ಶನಕ್ಕೆ ಭಕ್ತರ ನೂಕುನುಗ್ಗಲು
ಬಾಗೇಪಲ್ಲಿ: ಪ್ರಥಮ ಶ್ರಾವಣ ಶನಿವಾರದ ಅಂಗವಾಗಿ ತಾಲೂಕಿನ ಪುರಾಣ ಪ್ರಸಿದ್ಧ ದೇವರಗುಡಿಪಲ್ಲಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರು ನೂಕುನುಗ್ಗಲಿನಲ್ಲಿ ದೇವರ ದರ್ಶನ ಪಡೆದರು.
ಶನಿವಾರ ಬೆಳಗ್ಗೆ 3 ಗಂಟೆಗೆ ಭಕ್ತಾಧಿಗಳು ದೇವಾಲಯದತ್ತ ಸಾಲು ಸಾಲಾಗಿ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿ ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲೇ ಸಾಲು ಇಂದು ನಾಗ ಚತುರ್ದಶಿ ನಾಳೆ ನಾಗರ ಪಂಚಮಿ ಮುಂದಿನ ವಾರ ವರ ಮಹಾಲಕ್ಷ್ಮಿ ಹಬ್ಬ ಈಗೇ ಹಿಂದುಳಿದ ಪವಿತ್ರ ಹಬ್ಬಗಳ ಸಾಲುಗಟ್ಟಿ ನಿಂತಿವೆ.
ಆದರೆ ಹಲವಾರು ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಕಂಗಲಾಗಿರುವ ರೈತರು ಹಾಗೂ ಸಾರ್ವಜನಿಕರು ಹಬ್ಬಗಳಲ್ಲಿ ಹಬ್ಬದ ಸಾಮಗ್ರಿಗಳನ್ನು ಕೊಳ್ಳಲು ಆರ್ಥಿಕ ಸಮಸ್ಯೆಗಳಿಂದ ಹಾಗೂ ದುಬಾರಿ ಬೆಲೆಗಳಿಂದ ತತ್ತರಿಸಿದ್ದಾರೆ ಆದರೂ ಶಕ್ತಾನುಸಾರ ಹಬ್ಬಗಳ ಆಚರಣೆ ಮಾಡುತ್ತಾ ಬಂದಿರುವುದು ಹಿಂದೂ ಸಂಪ್ರದಾಯ.ದೇವಾಲಯಕ್ಕೆ ಬರುವ ಪ್ರತಿ ಭಕ್ತರು ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗಲಿ ಎಂದು ಪ್ರಾರ್ಥನೆ ಮಾಡಿ ದೇವಾಲಯದಿಂದ ಹೊರ ಬರುತ್ತಿದ್ದಾರೆ. ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯವನ್ನು ತಳಿರು ತೋರಣ, ವಿದ್ಯುದೀಪಾಲಂಕಾರಗಳಿಂದ ಶೃಂಗರಿಸಿ ದೇವಾಲಯಕ್ಕೆ ಸುಣ್ಣಬಣ್ಣ ಬಳದು ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಅದೇ ರೀತಿಯಲ್ಲಿ ಸಹಸ್ರಾರು ಭಕ್ತಾಧಿಗಳು ಪಟ್ಟಣಕ್ಕೆ ಸಮೀಪದಲ್ಲಿರುವ ಗಡಿದಂ ಬೆಟ್ಟದ ಶ್ರೀರಾಮಶ್ವೇರ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀಶನಿಶ್ವೇರ ದೇವರ ದರ್ಶನ ಪಡೆದರು. ಈ ಕಾರ್ಯಕ್ರಮದಲ್ಲಿ ಅನ್ನದಾನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ದೇವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.
ತಹಸೀಲ್ದಾರ್ ಎಂ.ಎ. ಪದ್ಮ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಟಿ.ಚಂದ್ರಮೋಹನ್,ಪ್ರಧಾನ ಆರ್ಚಕ ಕೆ. ಪ್ರಕಾಶ್ರಾವ್, ಸದಸ್ಯರಾದ ಎಲ್.ಶಿವಪ್ಪ, ಲಕ್ಷ್ಮಿದೇವಮ್ಮ, ಅಶ್ವತ್ಥಪ್ಪ, ಲಕ್ಷ್ಮಿಪತಿರೆಡ್ಡಿ, ಕೆ.ಎಸ್.ಯತಿರಾಜುಲು ನಾಯ್ಡು, ಮಂಜುನಾಥ, ನಾಗಲಕ್ಷ್ಮಮ್ಮ ಹಾಜರಿದ್ದರು.