ಶ್ರೀ ಕ್ಷೇತ್ರ ದಸರೀಘಟ್ಟಕ್ಕೆ ಶಾಸಕಲಿಂಬಾವಳಿ ಭೇಟಿ
ತಿಪಟೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಮಾಜಿ ಸಚಿವ ಹಾಲಿ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ವಿಷೇಶ ಪೂಜೆ ಸಲ್ಲಿಸಿ ಶ್ರೀ ಅಮ್ಮನವರ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ದೇವಾಲಯದ ಪರವಾಗಿ ಲಿಂಬಾವಳಿಯವರನ್ನು ಸನ್ಮಾನಿಸಿದರು.
ಬಡ ಮಹಿಳೆಯರ ಸ್ವಾವಲಂಬನೆಗಾಗಿ ಸಂಸ್ಥೆ: ಮುರಳಿ
ಪಾವಗಡ: ಎಚ್ಐವಿ ಪೀಡಿತರ ಮಕ್ಕಳ ಶಾಶ್ವತ ದತ್ತು ಸೇರಿದಂತೆ ಬಡ ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ಗೌತಮ ಬುದ್ಧ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ತೆರೆದಿರುವುದಾಗಿ ಸಂಸ್ಥೆಯ ಅಧ್ಯಕ್ಷ ಸಿ.ಪಿ.ಮುರಳಿ ತಿಳಿಸಿದರು. ಗೌತಮ ಬುದ್ಧ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಬುಧವಾರ ತಾ.ವೈ.ಎನ್ ಹೊಸಕೋಟೆ ಗ್ರಾಮದ ಇಂದಿರಾ ಬಡಾವಣೆಯ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಹೊಲಿಗೆ ತರಬೇತಿ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಕಳೆದ 10ವರ್ಷಗಳಿಂದ ತಾಲೂಕಿನಲ್ಲಿ ಮಳೆ ಬೆಳೆ ಇಲ್ಲದೇ ರೈತರು ಕಂಗಾಲಾಗಿ ಜೀವನೋಪಾಯಕ್ಕಾಗಿ ಕೂಲಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದು ಸಾಮಾನ್ಯವಾಗಿದ್ದು ಒಪ್ಪತ್ತಿನ ಗಂಜಿಗಾಗಿ ಈಗಾಗಲೇ ತಾಲೂಕಿನಿಂದ ಸುಮಾರು 23 ಸಾವಿರ ಕುಟುಂಬಗಳು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಹಾಲಿ ಇರುವ ಬಡ ಸಂಸಾರಗಳು ಜೀವನ ನಡೆಸುವುದು ದುಸ್ತಾರವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಬಡ ವಿದ್ಯಾರ್ಥಿನಿಯರ ಜೀವನೋಪಾಯಕ್ಕಾಗಿ ಟೈಲರಿಂಗ್ ತರಬೇತಿ ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ನೀಡಿ ಜೀವನ ಮಟ್ಟ ಸುಧಾರಿಸುವ ಹಿನ್ನೆಲೆಯಲ್ಲಿ ಬಡ ಮಹಿಳೆಯರಿಗೆ ಟೈಲರಿಂಗ್ ಮಿಷನ್ಗಳು ನೀಡುವುದಾಗಿ ಅವರು ತಿಳಿಸಿದರು. ಬಡವರ ಅಭಿವೃದ್ಧಿ ಸೇರಿದಂತೆ ಹಲವಾರು ಉದ್ದೇಶಗಳೊಂದಿಗೆ ಸಂಸ್ಥೆಯನ್ನು ತೆರೆದಿದ್ದು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪೆನ್ನು, ಪುಸ್ತಕ ವಿತರಣೆ ಸೇರಿದಂತೆ ಎಚ್ಐವಿ ಪೀಡಿತರ ಮಕ್ಳಳನ್ನು ದತ್ತು ಪಡೆದು ಉಚಿತ ವಿದ್ಯಾಭ್ಯಾಸ ಹಾಗೂ ಬಡವರಿಗೆ ಸಿಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ತಾಪಂ ಮಾಜಿ ಅಧ್ಯಕ್ಷೆ ಯಶೋಧಮ್ಮ ಜಿ.ಬಿ.ದೇವರಾಜ್, ಗ್ರಾಪಂ ಅಧ್ಯಕ್ಷೆ ಸುಜಾತ ಮುಂತಾದವರು ಮಹಿಳೆಯರ ಅಭಿವೃದ್ಧಿ ಕುರಿತು ಮಾತನಾಡಿದರು. ಗ್ರಾಪಂ ಸದಸ್ಯ ಜಯರಾಮ್, ಮಲ್ಲಿಕಾರ್ಜುನ, ಧನುಂಜಯ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ಇಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಗುಬ್ಬಿ: ಅಗ್ನಿವಂಶ ಕ್ಷತಿಯ(ತಿಗಳ)ವಿದ್ಯಾಭಿವೃದ್ಧಿ ಸಂಘದಿಂದ ಸಂಘದ ಸರ್ವಸದಸ್ಯರ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಆಗಸ್ಟ್ 11ರಂದು ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಿ.ಬಿ.ಮಲ್ಲಣ್ಣ ಹಾಗೂ ಖಜಾಂಚಿ ಜಿ.ಗೋವಿಂದಯ್ಯ ತಿಳಿಸಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ನಾಗರಾಜು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದರು.
ಇಂದು ಉದ್ಘಾಟನೆ
ತುಮಕೂರು: ಆ. 11 ರಂದು ಬೆಳಗ್ಗೆ 10-30 ಕ್ಕೆ ತುಮಕೂರು ಗ್ರಾಮಾಂತರದ ಗೂಳೂರು ಹೋಬಳಿಯ ಬೈಚಾಪುರದಲ್ಲಿ ಛಲವಾದಿ ಮಹಾಸಭಾ ಗ್ರಾಮಶಾಖೆ ಉದ್ಘಾಟನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 122 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಶಿವರಾಮ್ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಹಾಗೂ ನೆಲಮಂಗಲ ಶಾಸಕ ಡಾ. ಶ್ರೀನಿವಾಸ್ ಪಾಲ್ಗೊಳ್ಳಲ್ಲಿದ್ದಾರೆ.