ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
ಶಿಡ್ಲಘಟ್ಟ: ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆದು ಇಂದಿನ ಮಕ್ಕಳನ್ನು ಯ್ಯೋಗ್ಯ ನಾಗರಿಕರನ್ನಾಗಿ ತಯಾರಿಸಿ ದೇಶ ಕಟ್ಟಬೇಕಾಗಿದೆ. ಇಂತಹ ಸಮಾರಂಭಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಜವಾಬ್ದಾರಿ ದೊಡ್ಡದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ. ವೀರಣ್ಣನವರ್ ಹೇಳಿದರು. ಇಲ್ಲಿನ ವಾಸವಿ ಶಾಲೆಯಲ್ಲಿ ವಿವೇಕಾನಂದ ಪ್ರತಿಷ್ಠಾನ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕಬಳ್ಳಾಪುರ ರಾಮಕೃಷ್ಣ ಆಶ್ರಮದ ಸ್ವಾಮಿಜೀಗಳಾದ ಪೂರ್ಣಾನಂದಜೀ ಮಹಾರಾಜ್ ಆಶೀರ್ವಚನ ನೀಡಿದರು. ಜಾದೂಗಾರ್ ಜಗನ್ನಾಥಶಾಸ್ತ್ರೀ ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎ.ಜಿ. ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯ ದೇವರಾಜ ಅರಸ್, ಬಿಇಒ ರಘುನಾಥ ರೆಡ್ಡಿ, ವಕೀಲ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ಸಾಲ ಹಿಂದಿರುಗಿಸಿ ಪ್ರಗತಿ ಸಾಧಿಸಿ: ಸೆಲ್ವಂ
ಬಂಗಾರಪೇಟೆ: ಬ್ಯಾಂಕಿನಿಂದ ಪಡೆಯುವ ಯಾವುದೇ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಿದರೆ ಬ್ಯಾಂಕ್ ಮತ್ತಷ್ಟು ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ಸಾಲ ನೀಡಿ ಅವರನ್ನು ಮೇಲೆತ್ತಬಹುದು. ಆದ್ದರಿಂದ ಬ್ಯಾಂಕ್ನಿಂದ ಸಾಲ ಪಡುಯುವಾಗ ತೋರುವ ಆಸಕ್ತಿಯನ್ನು ಮರು ಪಾವತಿಯಲ್ಲಿಯೂ ಫಲಾನುಭವಿಗಳು ತೋರಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೋಲಾರ ಶಾಖೆಯ ವ್ಯವಸ್ಥಾಪಕ ಆನಂದ್ ಸೆಲ್ಪಂ ಹೇಳಿದರು. ಪಟ್ಟಣದ ಸಂತೋಷ್ ಶಾಲೆ ಆವರಣದಲ್ಲಿ ಸ್ಥಳೀಯ ಎಸ್ಬಿಎಂ ಶಾಖೆ ಹಮ್ಮಿಕೊಂಡಿದ್ದ ಕೃಷಿ ಸಾಲ ಮೇಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಲ ಪಡೆಯುವವರ ಪೈಕಿ ಸಕಾಲಕ್ಕೆ ಸಾಲ ಪಾವತಿಸುವವರ ಪೈಕಿ ಮಹಿಳಾ ಸಂಘಗಳು ಮುಂದಿವೆ ಎಂದರು. ರೈತ ಸಂಘದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಕ್ಷೇತ್ರವನ್ನು ಬರ ಆವರಿಸಿ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಮೈಸೂರು ಬ್ಯಾಂಕಿನಿಂದ ಪಡೆದ ಸಾಲ ಮರು ಪಾವತಿಗೆ ಹೆಚ್ಚಿನ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ದಬ್ಬಾಳಿಕೆ ನಡೆಸಬಾರದು ಎಂದು ಆಗ್ರಹಿಸಿದರು. ಇದೇ ವೇಳೆ ಸಮಯಕ್ಕೆ ಸಾಲ ಪಾವತಿಸಿದ ಕೆಲ ರೈತರನ್ನು ಸನ್ಮಾನಿಸಲಾಯಿತು. ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಹೊಸ ಸಾಲ ವಿತರಿಸಲಾಯಿತು. ಸ್ಥಳೀಯ ಶಾಖೆ ವ್ಯವಸ್ಥಾಪಕ ರಾಜೇಶಕುಮಾರ್, ಸೂಲಿಕುಂಟೆ ಶಾಖೆ ಶಾರದಾ,ಬೂದಿಕೋಟೆ ಶಾಖೆ ಮಂಜುಳಾ, ರವೀಂದ್ರ ಕುಮಾರ್ ಇದ್ದರು.