ಕುಂಬಾರ ಸಮುದಾಯ ರಾಜಕೀಯ ಶಕ್ತಿ ಮೆರೆಯಲಿ: ವೆಂಕಟಸ್ವಾಮಿ ಕರೆ
ಕ.ಪ್ರ.ವಾರ್ತೆ, ಕೋಲಾರ, ಆ.11
ಹಿಂದುಳಿದ ವರ್ಗಕ್ಕೆ ಸೇರಿದ ಕುಂಬಾರ ಜನಾಂಗ ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಂಘಟನೆ ಬಲಗೊಳಿಸುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಲು ಹೆಚ್ಚಿನ ಗಮನ ನೀಡಿ ಎಂದು ಲೋಕ ಸೇವಾ ಆಯೋಗದ ಮಾಜಿ ಸದಸ್ಯ ವೆಂಕಟಸ್ವಾಮಿ ಕರೆ ನೀಡಿದರು.
ಜಿಲ್ಲಾ ಕುಂಬಾರರ ಸಂಘದ ವತಿಯಿಂದ ನಗರದ ಕೆ.ಎಸ್.ವಿ. ಕಲಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂಬಾರ ಸಮುದಾಯ ಇತ್ತೀಚಿನ ದಿನಗಳಲ್ಲಿ ಸಂಘಟನೆಗೊಳ್ಳುವುದು ಕಡಿಮೆಯಾಗುತ್ತಿದೆ. ಇದರಿಂದ ನಮ್ಮನ್ನು ಆಳುವ ಸರ್ಕಾರಗಳು ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯುವುದಕ್ಕೆ ಕಾರಣವಾಗಿರುವುದರಿಂದ ಮೊದಲು ಸಂಘಟನೆ ಬಲಪಡಿಸಬೇಕಾಗಿದೆ ಎಂದರು.
ಸಮುದಾಯಕ್ಕೆ ಸೇರಿದ ಮಕ್ಕಳು ಶಿಕ್ಷಣದ ಕಡೆ ಆಸಕ್ತಿ ತೋರುವಂತೆ ಕಾರ್ಯಕ್ರಮ ಜಾರಿಗೆ ತರಬೇಕು, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗಿಸಬೇಕು. ದಾನಿಗಳ ಸಹಕಾರ ಪಡೆದು ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕಕು. ಉನ್ನತ ಶಿಕ್ಷಣಕ್ಕೆ ಹೋಗುವ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ತಾವು ಭರಿಸಲು ಸಿದ್ಧ ಎಂದು ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಣ ಇಲಾಖೆ ಮಧ್ಯಾಹ್ನ ಉಪಹಾರ ಯೋಜನೆಯ ಸಹ ನಿರ್ದೇಶಕ ಕೆ.ಎಂ. ಗಂಗರಾಜ್, ಕುಂಬಾರಿಕೆ ಉದ್ಯಮ ನಶಿಸುತ್ತಿದೆ. ಆರ್ಥಿಕವಾಗಿ ಮುಂದೆ ಬರಲು ಬೇರೆ ಉದ್ಯಮಗಳಲ್ಲೂ ತೊಡಗಬೇಕೆಂದರು.
ಚಿತ್ರದುರ್ಗದ ಬಸವ ಕುಂಬಾರ ಗುಂಡಯ್ಯ ಶರಣರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಶೈಕ್ಷಣಿಕವಾಗಿ ಸಮಾಜ ಮುಂದೆ ತರಬೇಕು. ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿ ಎಂದರು.
ನಿವೃತ್ತ ಸಾಂಖ್ಯಿಕ ಅಧಿಕಾರಿ ಗಂಗಯಲ್ಲಯ್ಯ, ಕುಂಬಾರ ಸಂಘದ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿದರು. ವಾಸುದೇವಮೂರ್ತಿ, ಶ್ರೀನಿವಾಸ್, ಶಿಕ್ಷಣ ಇಲಾಖೆ ಸಹ ನಿರ್ದೇಶಕ ಗಂಗರಾಜ್, ಸಹಾಯಕ ಎಂಜನಿಯರ್ ಸುಬ್ಬರಾಯಪ್ಪ, ಧರ್ಮದರ್ಶಿ ಹೊಗರಿ ನಾರಾಯಣಪ್ಪರನ್ನು ಸನ್ಮಾನಿಸಲಾಯಿತು.
ಕಲ್ಲಂಡೂರಿನ ಶ್ರೀನಿವಾಸಪ್ಪ ಮಂಗಮ್ಮ ದಂಪತಿ ತಮ್ಮ ದಿವಂಗತ ಪುತ್ರಿ ರಾಧಾ ಅವರ ಸ್ಮರಣಾರ್ಥ ನೀಡುವ ನಗದು ಪುರಸ್ಕಾರ, ಚಿಕ್ಕ ರೆಡ್ಡಪ್ಪ ಅವರು ನೀಡಿದ ನಗದು ಪುರಸ್ಕಾರವನ್ನು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 60 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ರಾಜ್ಯ ಕುಂಬಾರರ ಸಂಘದ ಮಾಜಿ ಅಧ್ಯಕ್ಷ ಬಿ.ವಿ. ರಾಮಚಂದ್ರಪ್ಪ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಪ್ಪ, ಕಂಬಾರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಡಿ.ಎನ್.ಆಂಜಿನಪ್ಪ, ಜನಾಂಗದ ಮುಖಂಡರಾದ ಗೌಡಹಳ್ಳಿ ವೆಂಕಟಸ್ವಾಮಿ, ಆನಂದ್ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರೆಡ್ಡಪ್ಪ ಸ್ವಾಗತಿಸಿ, ಶಿಕ್ಷಕ ಚಿಕ್ಕರೆಡ್ಡಪ್ಪ ವಂದಿಸಿದರು.