ದಿನಗೂಲಿ ನೌಕರರ ಕಾಯಂಗೆ ಆಗ್ರಹ
ಕ.ಪ್ರ.ವಾರ್ತೆ ಕೋಲಾರ ಆ.11
ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕಾಯಂ ಮಾಡಿ ಸೇವಾ ಭದ್ರತೆ ಕಲ್ಪಿಸಬೇಕು. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು. ದಿನಗೂಲಿ ನೌಕರರಿಗೂ ಪಿಂಚಣಿ ಸೌಲಭ್ಯ ಹಾಗೂ ಬ್ಯಾಂಕುಗಳಲ್ಲಿ ವ್ಯವಹಾರ ಆಧಾರಿತ ಮಾನವ ಸಂಪನ್ಮೂಲ ಯೋಜನೆ ಜಾರಿಗೆ ತರಬೇಕೆಂದು ಪ್ರಗತಿ ಗ್ರಾಮೀಣ ಬ್ಯಾಂಕಿನ ಅಧಿಕಾರಿಗಳ ಸಂಘ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ನಗರದ ಕೀಲುಕೋಟೆಯ ಕೆ.ವಿ.ಎಸ್. ಕಲ್ಯಾಣ ಮಂದಿರದಲ್ಲಿ ಭಾನುವಾರ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಸಂಘದ 4ನೇ ದ್ವೈವಾರ್ಷಿಕ ಮಹಾಸಭೆಯಲ್ಲಿ ವೈಜ್ಞಾನಿಕ ಮಾನವ ಸಂಪನ್ಮೂಲ ಯೋಜನೆ ಇಲ್ಲದ ಹಿನ್ನೆಲೆಯಲ್ಲಿ ಬ್ಯಾಂಕುಗಳು ವಿವಿಧ ಹುದ್ದೆಗಳಿಗೆ ಅಗತ್ಯವಿರುವ ಸಿಬ್ಬಂದಿಯನ್ನು ಪ್ರಮುಖವಾಗಿ ಉಪ ಸಿಬ್ಬಂದಿ ಹುದ್ದೆಗೆ ನೇಮಕಾತಿ ಮಾಡದೇ ದಿನಗೂಲಿಗಳನ್ನು ಕೆಲಸಕ್ಕೆ ತೆಗೆದುಕೊಂಡು ಶೋಷಣೆ ನಡೆಸುತ್ತಿದೆ ಎಂದು ಮಹಾಸಭೆ ಗೊತ್ತುವಳಿ ಮಂಡಿಸಿತು.
ಹೊಸದಾಗಿ ಪ್ರಾರಂಭಗೊಂಡ ಶಾಖೆಗೆ ಉಪಸಿಬ್ಬಂದಿ ನೀಡದೇ ಸ್ಥಳೀಯರನ್ನು ದಿನಗೂಲಿಯಾಗಿ ನೇಮಕ ಮಾಡಿಕೊಂಡು ಅವರಿಂದ ಬ್ಯಾಂಕಿನ ಉಪಸಿಬ್ಬಂದಿಯ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು ನೇಮಕಾತಿಗೆ ಸಂಬಂಧಿಸಿದ ಯಾವುದೇ ದಾಖಲೆ ಇಡಲಾರದೇ ಇರುವ ವ್ಯವಸ್ಥೆ ವಿಷಾದನೀಯ ಎಂದು ಸಭೆ ಪರಿಗಣಿಸಿತು.
ದಿನಗೂಲಿ ಹೆಸರಿನ ಉಪ ಸಿಬ್ಬಂದಿಗೆ ಯಾವುದೇ ವೇತನ ಶ್ರೇಣಿಯಾಗಲೀ, ಕೆಲಸದ ಭದ್ರತೆ ಹಾಗೂ ಮತ್ಯಾವುದೇ ಸೌಲಭಗಳನ್ನು ನೀಡದಿರುವುದು. ಸೇವೆ ಕಾಯಂ ಮಾಡದಿರುವುದು ಈ ದೇಶದ ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಭೆ ಆರೋಪಿಸಿತು. ಈಗಿರುವ ದಿನಗೂಲಿ ನೌಕರರ ವಿದ್ಯಾರ್ಹತೆ ಹಾಗೂ ವಯೋವುತಿಯ ಕಟ್ಟಲೆಗಳನ್ನು ಸಡಲಿಸಿ ಅವರನ್ನು ಕಾಯಂ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಸಭೆಯು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ವರ್ಗಾವಣೆ ನೀಡಿ: ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 2006ರಲ್ಲೇ ವರ್ಗಾವಣೆ ನೀತಿ ಜಾರಿಯಲ್ಲಿದೆ. ಉದ್ಯೋಗಿಗಳ ಮನವಿಗೆ ಆದ್ಯತೆ, ಕಾಯಿಲೆಗಳಿಂದ ಬಳಲುವವರಿಗೆ ಅನುಕಂಪದ ಮೇಲೆ ವರ್ಗಾವಣೆ, ಗಂಡ- ಹೆಂಡತಿ ಒಂದೇ ಬ್ಯಾಂಕಿನಲ್ಲಿದ್ದರೆ ಹಾಗೂ ಗಂಡ ಅಥವಾ ಹೆಂಡತಿ ಬೇರೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅವರಿಗೆ ಅನುಕೂಲಕರ ರೀತಿಯಲ್ಲಿ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಲಾಯಿತು.
ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಅವರ ಮನವಿಯ ಮೇರೆಗೆ ಪಟ್ಟಣದ ಶಾಖೆಗಳಿಗೆ ವರ್ಗಾವಣೆ ಮಾಡಬೇಕು, ಆಡಳಿತ ಕಚೇರಿಯಲ್ಲಿ ಕೆಲಸ ಮಾಡುವವರನ್ನು ಮತ್ತೆ ಆಡಳಿತ ಕಚೇರಿಗೆ ವರ್ಗಾವಣೆ ಮಾಡಿರುವುದು, ಉದ್ಯೋಗಿಗಳ ಮನವಿಗೆ ಆದ್ಯತೆ ನೀಡದೇ ಇರುವುದು ಹಾಗೂ ಕೋಲಾರಕ್ಕೆ ಸುಮಾರು 300 ಕಿಮೀ ದೂರದ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿರುವುದರಿಂದ ಸದಸ್ಯರಿಗೆ ತೊಂದರೆ ಆಗುತ್ತಿರುವುದರಿಂದ ಕೂಡಲೇ ವರ್ಗಾವಣೆ ನೀತಿಯನ್ನು ಪಾಲಿಸಬೇಕೆಂದು ಆಗ್ರಹಿಸಲಾಯಿತು. ಪ್ರಸಕ್ತ ವರ್ಗಾವಣೆ ನೀತಿಯಲ್ಲಿ ಸಾಕಷ್ಟು ಲೋಪಗಳು ಇರುವುದರಿಂದ ಅವುಗಳ ತಿದ್ದುಪಡಿ ಮಾಡಬೇಕಾಗಿರುವುದರಿಂದ ಉಪ ಸಮಿತಿ ರಚನೆ ಮಾಡಬೇಕೆಂದು ಗೊತ್ತುವಳಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಮಾನವ ಸಂಪನ್ಮೂಲ ಯೋಜನೆ: ಗ್ರಾಮೀಣ ಬ್ಯಾಂಕುಗಳಲ್ಲಿ ಮಾನವ ಶಕ್ತಿ ದಿನೇ ದಿನೇ ಕುಸಿಯುತ್ತಿದೆ. 1990 ರಿಂದ ಯಾವುದೇ ನೇಮಕಾತಿ ನಡೆದಿರಲಿಲ್ಲ. ಸಂಘದ ಹೋರಾಟದಿಂದಾಗಿ ಮಾವನ ಶಕ್ತಿ ಅಗತ್ಯತೆಯ ಬಗ್ಗೆ ಅಧ್ಯಯನ ಮಾಡಿದ ಹೋರಾಟ ಸಮಿತಿಯ ಶಿಫಾರ್ಸಿನ ಮೇಲೆ 2008-09 ರಿಂದೀಚೆಗೆ ನೇಮಕಾತಿ ನಡೆಯುತ್ತಿದ್ದರೂ ವ್ಯವಹಾರ ಆಧಾರಿತ ಮಾನವ ಸಂಪನ್ಮೂಲ ಇಲ್ಲದಿರುವುದರಿಂದ ಗ್ರಾಹಕರ ಬೇಡಿಕೆ ಈಡೇರಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗದಿರುವುದರಿಂದ ಕೇಂದ್ರ ಸರ್ಕಾರ ಮಾನವ ಶಕ್ತಿ ಹೆಚ್ಚಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಹಾಗೂ ಸದಸ್ಯರು ಒತ್ತಾಯಿಸಿದರು. ಮಹಾಸಭೆಯನ್ನು ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಫೆಡರೇಷನ್ ವಿಶೇಷ ಆಹ್ವಾನಿತರಾದ ಕಾಂ.ಎಸ್.ರೇವಣ್ಣ ಉದ್ಘಾಟಿಸಿ, ಸಂಘದ ಪ್ರತಿಯೊಬ್ಬರು ಐಕ್ಯತೆ ಪ್ರತಿಪಾದಿಸಿದಾಗ ಮಾತ್ರ ಬೇಡಿಕೆಗಳು ಈಡೇರುತ್ತವೆ ಎಂದರು.
ಕೇಂದ್ರ ಸರ್ಕಾರ ಖಾಸಗಿ ಹಣಕಾಸು ಸಂಸ್ಥೆಗಳಿಗೆ ರತ್ನಗಂಬಳಿ ಹಾಸುತ್ತಿರುವುದರಿಂದ ಸಾರ್ವಜನಿಕ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳನ್ನು ಮುಚ್ಚಿ ಖಾಸಗಿ ಬ್ಯಾಂಕುಗಳನ್ನು ಅಭಿವೃದ್ಧಿಪಡಿಸುವುದು ಕೇಂದ್ರದ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ಭೂಮಿ ಕಾರ್ಯಕ್ರಮ ನಮಗೆ ದೊಡ್ಡ ಪ್ರಶ್ನೆ ಹಾಗೂ ಸವಾಲು ಆಗಿದೆ, ಸಾರ್ವಜನಿಕ ಸಂಸ್ಥೆಗಳನ್ನು ಒಡೆದು ಖಾಸಗಿಯವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 26 ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ನೀಡಿದೆ ಎಂದು ಟೀಕಿಸಿದರು. ಕೃಷಿಗೆ ಪ್ರಾಮುಖ್ಯತೆ ನೀಡುವುದು ಗ್ರಾಮೀಣ ಬ್ಯಾಂಕಿನ ಮೂಲ ಉದ್ದೇಶವಾಗಿದೆ, ಡಾ.ಸ್ವಾಮಿನಾಥನ್ ವರದಿಯನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ. ಕೃಷಿಯನ್ನು ನಾಶ ಮಾಡಿ ಕಾರ್ಪೋರೇಟ್ ಸಂಸ್ಥೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಗ್ರಾಮೀಣ ಬ್ಯಾಂಕ್ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ ಎಂದರು.
ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕುಗಳ ಉತ್ತೇಜನ, ಉಳುವಿಗಾಗಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕು ಸ್ಥಾಪಿಸಬೇಕು. ಮಾವೀಕರ ಪರ ಕಾನೂನು ತಿದ್ದುಪಡಿ ಮಾಡಬೇಕು. ರೀಯಲ್ ಎಸ್ಟೇಟ್ನವರಿಗೆ ಅನುಕೂಲವಾಗುವ ರೀತಿಯಲ್ಲಿ ಭೂಮಿ ಯೋಜನೆ ಜಾರಿಗೆ ತರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮಹಾಸಭೆಯಲ್ಲಿ ಎಕೆಜಿಬಿಇಎಫ್ ಅಧ್ಯಕ್ಷ ಕಾಂ.ಹೆಚ್.ನಾಗಭೂಷಣರಾವ್, ಪ್ರಧಾನ ಕಾರ್ಯದರ್ಶಿ ಕಾಂ.ಗಣಪತಿ ಹೆಗಡೆ, ಕಾಂ. ಕೆ.ಆರ್. ಆನಂದರೆಡ್ಡಿ, ಟಿ.ಭದ್ರಾನಾಯಕ್, ಜಿಲ್ಲಾ ಪ್ರಗತಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ.ಆರ್.ಶೆಣೈ, ಮುಖಂಡರಾದ ರಾಜಶೇಖರ್, ಗುರುಮೂರ್ತಿ, ಕುಬೇರ್ ನಾಯಕ್ ಇದ್ದರು.
ಸ್ವಾಗತ ಸಮಿತಿ ಪರವಾಗಿ ಕಾಂ.ಪಾಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಿ.ವೆಂಕಟರಾಮಪ್ಪ ನಿರೂಪಿಸಿದರು