'ಪಾಕ್ ಬಗ್ಗೆ ಕೇಂದ್ರದ ಮೃದು ಧೋರಣೆ ಸಲ್ಲದು'
ಕ.ಪ್ರ.ವಾರ್ತೆ ಶ್ರೀನಿವಾಸಪುರ ಆ.12
ಗಡಿ ಭಾಗದಲ್ಲಿ ಭಾರತೀಯ ವೀರಯೋಧನ ತಲೆ ಕಡಿದ ಪಾಕ್ ಸೈನಿಕರು ಶವ ಗಡಿಯಲ್ಲಿ ಎಸೆದು ಹೋಗಿರುವ ಕ್ರೂರ ಕೃತ್ಯ ಮಾಸುವ ಮುನ್ನವೇ ಕದನ ವಿರಾಮ ಉಲ್ಲಂಘಿಸಿ 5 ಭಾರತೀಯ ಯೋಧರನ್ನು ಹತ್ಯೆಗೈದಿರುವ ಪಾಕಿಸ್ತಾನದ ನೀತಿ ಮತ್ತು ಪಾಕ್ ಬಗ್ಗೆ ಮೃದು ಧೋರಣೆ ತಳೆಯುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಶ್ರೀನಿವಾಸಪುರ ಬಿಜೆಪಿ ಕಾರ್ಯಕರ್ತರು ಸೋಮವಾರ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
3 ವರ್ಷಗಳಲ್ಲಿ 270 ಮಂದಿ ಉಗ್ರರು ಭಾರತದೊಳಗೆ ನುಸುಳಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಇದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹೇಡಿಯಂತೆ ಪಾಕಿಸ್ತಾನವನ್ನು ಓಲೈಸುವಂತೆ ಬೇಜಾವಾಬ್ದಾರಿ ಹೇಳಿಕೆ ನೀಡುತ್ತಿರುವುದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವಂತಿದೆ. ಪಾಕಿಸ್ತಾನ ಮತ್ತು ಚೀನಾದ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಗಮನಿಸಿದರೆ ಕಾಂಗ್ರೆಸ್ ಭಾರತದ ಜೋತೆಗಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ಎಂಬ ಸಂಶಯ ವ್ಯಕ್ತವಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೇಂದ್ರ ಸರ್ಕಾರ ವಿರುದ್ಧ ಹಾಗೂ ಕೇಂದ್ರ ರಕ್ಷಣಾ ಸಚಿವರಾದ ಎ.ಕೆ. ಆ್ಯಂಟನಿ ವಿರುದ್ಧ ಘೋಷಣೆಗಳನ್ನು ಕೂಗಿ, ಈ ಕೂಡಲೇ ಜವಾಬ್ದಾರಿ ಹೊತ್ತು ರಕ್ಷಣಾ ಸಚಿವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಉಪಾಧ್ಯಕ್ಷ ಎ.ಎನ್. ಜಯರಾಮರೆಡ್ಡಿ, ರವಿತೇಜ, ಲಕ್ಷ್ಮಣಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ಆರ್. ನಾರಾಯಣಸ್ವಾಮಿ ಬಂಗವಾದಿ ನಾಗರಾಜ್ ಆಪರೇಟರ್ ನಾರಾಯಣಸ್ವಾಮಿ, ನಲ್ಲಪಲ್ಲಿ ರೆಡ್ಡೆಪ್ಪ ವಹಿಸಿದ್ದರು.