ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಖ್ಯಮಂತ್ರಿ ವಕ್ಕಲಿಗರ ವಿರೋಧಿ ಅಲ್ಲ: ಸೋಮಶೇಖರ್

Rashmi Kasaragodu
Updated On : 13 Aug 2013, 12:30 pm

ಕ.ಪ್ರ.ವಾರ್ತೆ     ಕೋಲಾರ     ಆ.12
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕನಾಯಕ ದಿ.ಲೋಹಿಯಾ ಅವರ ಅನುಯಾಯಿಯಾಗಿದ್ದಾರೆ,ಎಲ್ಲ ವರ್ಗದ ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲ ಹಿತಾಸಕ್ತಿಗಳು ಸಿದ್ದರಾಮಯ್ಯನವರನ್ನು ವಕ್ಕಲಿಗರ ವಿರೋಧಿ ಎಂದು ಬಿಂಬಿಸುತ್ತಿದ್ದಾರೆಂದು ಬೆಂಗಳೂರು ವಿವಿಯ ಉಪನ್ಯಾಸಕ ಸೋಮಶೇಖರ್ ವಿಷಾದ ವ್ಯಕ್ತಪಡಿಸಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ 66ನೇ ಹುಟ್ಟು ಹಬ್ಬ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಸಂಸ್ಮರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರು ತಾತ್ವಿಕ ಸಿದ್ಧಾಂತಗಳನ್ನು ಹೊಂದಿದ್ದರು, ಈ ಇಬ್ಬರು ನಾಯಕರು ಹಿಂದುಳಿದವರು, ಶೋಷಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಅರಸು ಅವರಿಗೆ ದೊಡ್ಡ ಪರಂಪರೆಯಿದೆ. ಇದೇ ರೀತಿ ಸಿದ್ದರಾಮಯ್ಯನವರು ದುರ್ಬಲವರ್ಗದ ಮಹಾನ್ ಶಕ್ತಿಯಾಗಿದ್ದಾರೆಂದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವುದರಿಂದ ಇಡೀ ಹಿಂದುಳಿದ ವರ್ಗ ಅವರ ಹಿಂದೆ ಹೋಗುತ್ತಿರುವುದರಿಂದ, ಉತ್ತಮ ಆಡಳಿತಕ್ಕೆ ಬೆಂಬಲ ನೀಡುತ್ತಿರುವುದರಿಂದ ಹತಾಶೆಗೊಂಡಿರುವ ಕೆಲ ಕಿಡಿಗೇಡಿಗಳು ಹಿಂದುಳಿದ ಮತ್ತು ಮುಗ್ಧ ವಕ್ಕಲಿಗರನ್ನು ಬೇರ್ಪಡಿಸುವ ದುರುದ್ದೇಶದಿಂದ ಕಿಚ್ಚು ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು.
ಸಿದ್ದರಾಮಯ್ಯನವರು ಅಪ್ಪಟ ಸಮಾಜವಾದಿ ಆಗಿರುವುದರಿಂದ ವಕ್ಕಲಿಗರ ವಿರೋಧಿ ಎಂದು ಬಿಂಬಿಸುವುದರಲ್ಲಿ ಅರ್ಥವಿಲ್ಲ, ಜಾತಿ ವ್ಯವಸ್ಥೆ ಇರುವ ತನಕ ಮೀಸಲಾತಿ ಇರಬೇಕೆಂದು ಹೇಳುವ ಮೂಲಕ ಬಡವರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ, ಜಾತಿ ಗಣತಿ ನಡೆಸುವುದಕ್ಕೆ ಮುಂದಾಗುವ ಮೂಲಕ ಯಾವ ಜಾತಿಗೆ ನಿಜವಾಗಲು ಮೀಸಲಾತಿ ಅಗತ್ಯವಿದೆ ಎಂಬುದನ್ನು ತಿಳಿದು ಸೂಕ್ತ ಕಾನೂನು ತರಲು ಬಯಸಿರುವುದು ವಕ್ಕಲಿಗ ವಿರೋಧಿತನ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಆಶಾ ಕಾರಣವಾಗಿದ್ದರು, ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಶೋಷಿತ ಸಮುದಾಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆಂದ ಸೋಮಶೇಖರ್, ಅರಸು ರೀತಿಯಲ್ಲೇ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರ ಆಗಿರುವುದರಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಬೇಕಾದರೆ ಕೂಡಲೇ ಹಿಂದುಳಿದವರ್ಗಗಳ ಆಯೋಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕು, ಬಿಜೆಪಿಯ ಸರ್ಕಾರವಿದ್ದಾಗ ಆಯೋಗಕ್ಕೆ ನೇಮಕವಾಗಿದ್ದವರೇ ಈಗಲೂ ಅಧ್ಯಕ್ಷರಾಗಿರುವುದರಿಂದ ಸಿದ್ದರಾಮಯ್ಯನವರ ಉದ್ದೇಶಗಳು, ಆಶಯಗಳು ಈಡೇರುವುದು ಕಷ್ಟವಾಗಬಹುದೆಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಬಡತನ ನಿವಾರಣೆ ಆಗಬೇಕಾದರೆ ಶೋಷಿತರ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಊರುಬಾಗಿಲು ಶ್ರೀನಿವಾಸ್, ಅರಸು ಮತ್ತು ಸಿದ್ದರಾಮಯ್ಯನವರಲ್ಲಿನ ಜನಪರ ಕಾಳಜಿಯನ್ನು ಕೊಂಡಾಡಿದರು. ಮುಖಂಡರಾದ ಜೆ.ಕೆ. ಜಯರಾಮ್, ನಗರಸಭೆ ಸದಸ್ಯ ಸಲ್ಲಾವುದ್ದೀನ್ ಬಾಬು, ಅಂಚೆ ಅಶ್ವತ್ಥ್, ನಗರಸಭೆ ಮಾಜಿ ಉಪಾಧ್ಯಕ್ಷೆ ಭಾರತಿ, ತಂಬಿಹಳ್ಳಿ ನಾಗರಾಜು, ಪಲ್ಗುಣ, ಸವಿತಾ ಸಮಾಜದ ಮುಖಂಡ ಮಂಜುನಾಥ್, ಬೆಸ್ತರ ಸಂಘದ ಮುನಿವೆಂಕಟಪ್ಪ, ಮಣಿ ಹಾಗೂ ಬೀರೇಶ್ವರಿ, ಜಫ್ರುಲ್ಲಾ, ಚಂಗೋಲಿ ನಾರಾಯಣಸ್ವಾಮಿ, ಕೀಲುಕೋಟೆ ನಾರಾಯಣಸ್ವಾಮಿ, ದಲಿತ ಮುಖಂಡ ಮುನಿರಾಜು ಇದ್ದರು. ಕಾರ್ಯಕ್ರಮದ ಸಂಘಟಕ ಕೆ.ಬಿ. ಶ್ರೀನಿವಾಸಮೂರ್ತಿ ಸ್ವಾಗತಿಸಿ,ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement