ರಸ್ತೆ ಕಾಮಗಾರಿ ಪರಿಶೀಲನೆ
ಕೋಲಾರ: ಗ್ರಾಮೀಣ ಜನತೆ ಮತ್ತು ಪುರಾಣ ಪ್ರಸಿದ್ಧ ಸೀತಿ ಬೆಟ್ಟಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೇರ ರಸ್ತೆ ಸಂಪರ್ಕ ಕಾಮಗಾರಿ ಶಾಸಕ ಆರ್. ವರ್ತೂರ್ ಪ್ರಕಾಶ್ ಸೋಮವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನ ಅರದಲ್ಲೂ ವಿಶೇಷವಾಗಿ ಹಬ್ಬದ ದಿನಗಳಲ್ಲಿ ನೂರರು ಭಕ್ತರು ಸೀತಿ ಬೆಟ್ಟದ ಶ್ರೀ ಬೈರವೇಶ್ವರ ಸ್ವಾಮಿ ದೇವಾಲಯಕ್ಕೆ ಬರುವುದರಿಂದ ನೇರ ರಸ್ತೆ ಸಂಪರ್ಕದ ಅವಶ್ಯಕತೆ ಇರುವುದನ್ನು ಮನಗೊಂಡು ರಸ್ತೆ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಚಿವ ದಿ. ಸಿ.ಬೈರೇಗೌಡರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸೀತಿ ಬೈರವೇಶ್ವರ ಬೆಟ್ಟಕ್ಕೆ ರಸ್ತೆ ಮಾರ್ಗದ ಕಾಮಗಾರಿ ನನ್ನ ಅವಧಿಯಲ್ಲಿ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ. ಈ ಕಾಮಗಾರಿಯ ಗುಣಮಟ್ಟ ಕಾಪಾಡುವುದು ಜನತೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಮಾತ್ರ ದಿ.ಬೈರೇಗೌಡರ ಕಟ್ಟಾ ಅನುಯಾಯಿಗಳಂತೆ ನಟಿಸುವ ವ್ಯಕ್ತಿ ನಾನಲ್ಲ, ಬೈರೇಗೌಡರ ಕಸನು ಈಡೇರಿಸುವ ಮೂಲಕ ಕೋಲಾರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಕೇವಲ ರಾಜಕೀಯ ಒಂದೇ ನನ್ನ ಗುರಿಯಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇನೆಂದರು.
ಗ್ರಾಮೀಣ ಜನತೆಗೆ ಮೂಲ ಸೌಕರ್ಯ ಕಲ್ಪಿಸಿದರೆ ನಮ್ಮನ್ನು ದೇವರಂತೆ ಪೂಜಿಸುತ್ತಾರೆ, ದ್ರೋಹ ಬಗೆದರೆ ಮನೆಯಲ್ಲಿ ಕೂರಿಸುತ್ತಾರೆಂದು ಮಾರ್ಮಿಕವಾಗಿ ನುಡಿದರು.
ಬೆಗ್ಲಿ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಬೈರಪ್ಪ, ಹರ್ಷವರ್ದನ್, ಶ್ರೀನಿವಾಸ್, ಗೋಪಾಲ್, ಕೃಷ್ಣ, ಲಕ್ಷ್ಮೀ ಸಾಗರ ಮುನಿರಾಜು ಮತ್ತಿತರರು ಇದ್ದರು.