ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯುತ್ ಕಣ್ಣಾಮುಚ್ಚಾಲೆ; ಬಳಲಿದ ಜನಜೀವನ

Rashmi Kasaragodu
Updated On : 13 Aug 2013, 12:29 pm

 ಕೆ. ರಮೇಶ್
ಕ.ಪ್ರ.ವಾರ್ತೆ     ಬಂಗಾರಪೇಟೆ     ಆ.12
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 10 ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಎಲ್ಲಾ ವರ್ಗದ ಜನರಿಗೆ ಅನಾನುಕೂಲವಾಗಿದೆ. ಪರಿಣಾಮ ಅಧಿಕಾರಿಗಳ ವಿರುದ್ದ ಜನರು ತಿರುಗಿ ಬೀಳುವಂತಾಗಿದೆ.
ಕೋಲಾರ ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲಾ ಕಡೆ ವರುಣ ದೇವರು ತನ್ನ ಪ್ರತಾಪ ತೋರಿಸಿರುವುದರಿಂದ ಎಲ್ಲಾ ನದಿ ನಾಲೆಗಳು ಮೈದುಂಬಿ ಹರಿಯುತ್ತಿದೆ. ಇದರಿಂದ ಜನರು ಮಳೆ ಎಂದರೆ ಬೆಚ್ಚಿ ಬೀಳುವಂತಾಗಿದ್ದರೆ, ಜಿಲ್ಲೆಯಲ್ಲಿ ಮಾತ್ರ ಮಳೆಗಾಗಿ ಜನರು ನಾನಾ ವ್ರತಗಳು, ಪೂಜೆಗಳು ಹಮ್ಮಿಕೊಂಡಿದ್ದರೂ ಸಹ ವರುಣ ದೇವರು ಮಾತ್ರ ಇತ್ತ ಕರುಣೆ ತೋರಿಸಲೇ ಇಲ್ಲ. ರಾಜ್ಯದ ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿದೆ, ಇದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಈಗಲೂ ವಿದ್ಯುತ್‌ಗೆ ಬರ ತಪ್ಪಿಲ್ಲ ಪ್ರತಿದಿನ ವಿದ್ಯುತ್ ಬೇಕಾ ಬಿಟ್ಟಿಯಾಗಿ ಕಡಿತವಾಗುತ್ತಿದೆ.
ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಇರುವುದೇ ಅಪರೂಪವಾಗಿದೆ. ಬೇಸಿಗೆ ಕಾಲದಲ್ಲಿ ವಿದ್ಯುತ್ ಕಡಿತವಾಗುವುದು ಸಹಜ. ಆದರೆ, ಮಳೆಗಾಲದಲ್ಲಿಯೂ ಈ ರೀತಿಯಲ್ಲಿ ಕಡಿತಗೊಳಿಸಿದರೆ ವಿದ್ಯುತ್ ನಂಬಿ ಹಲವು ವ್ಯವಹಾರಕ್ಕೆ ಕೋಟ್ಯಂತರ ರು. ಸುರಿದಿರುವ ವ್ಯಾಪಾರಸ್ಥರ ಪಾಡು ದೇವರೇ ಬಲ್ಲ. ವಿದ್ಯುತ್ ಸಮಸ್ಯೆಯಿಂದಾಗಿ ಮೊದಲೇ ಬರದಿಂದ ಬೆಂಡಾಗಿರುವ ಜನರಿಗೆ ಕುಡಿಯಲು ನೀರಿನ ಆಶ್ರಯವಾಗಿರುವ ಕೊಳವೆಬಾವಿಗಳಿಂದ ನೀರು ಮೇಲೆತ್ತಲೂ ವಿದ್ಯುತ್ ಅಭಾವದಿಂದಾಗಿ ನೀರಿಗೂ ಪರಿತಪಿಸುವಂತಾಗಿದೆ. ಇಷ್ಟು ದಿನ ನೀರಿಗಾಗಿ ಕೊಳಾಯಿಗಳ ಮುಂದೆ ಮಹಿಳೆಯರು ಬಿಂದಿಗೆಗಳನ್ನು ಹಿಡಿದು ಕಾಯುವಂತಾಗಿದೆ. ಈಗ ನೀರಿನ ಜೊತೆ ವಿದ್ಯುತ್ ಸಮರ್ಪಕ ಸೌಲಭ್ಯ ಯಾವಾಗ ಲಭಿಸುತ್ತದೋ ಎಂಬ ಕಿರಿಕಿರಿಯಲ್ಲೇ ಕಾಯುವಂತಾಗಿದೆ. ಲಕ್ಷಾಂತರ ರು. ವೆಚ್ಚ ಮಾಡಿ ಬೆಳೆ ಬೆಳೆದ ರೈತರೂ ಈಗ ನೀರು ಹಾಯಿಸಲು ವಿದ್ಯುತ್ ಕೊರತೆಯಿಂದ ಚಿಂತೆಗೀಡಾಗಿದ್ದಾರೆ. ಕೊರೆಸಿದ ಬೋರ್ ಬಳಕೆಗೆ ಬಾರದೆ ಬೇಸರಗೊಂಡಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ವಿದ್ಯುತ್ ಸಮಸ್ಯೆ ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಶಾಸಕರು ತಮ್ಮದೇ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಮುಖ್ಯಮಂತ್ರಿ ಬಳಿ ಹಾಗೂ ಅದಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಮುಕ್ತಿ ಕಾಣಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಸಮಸ್ಯೆ ಹೀಗೆ ಮುಂದುವರಿದರೆ ನಾಗರಿಕರು ಬೀದಿಗಿಳಿದು ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement