ಶಾಲೆಯಿಂದ 2 ಸಿಲಿಂಡರ್ ಕಳವು
ಕೆಜಿಎಫ್: ಶಾಲೆಯ ಅಡುಗೆ ಕೊಣೆ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು 2 ಸಿಲಿಂಡರ್ ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಾಮಿಕ ಶಾಲೆಗೆ ರಂಜಾನ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ನೀಡಲಾಗಿತ್ತು. ಮಾರನೆ ದಿನ ಬೆಳಗ್ಗೆ ಶಾಲೆ ಬೀಗವನ್ನು ತೆರೆದು ನೋಡಿದಾಗ ಅಡುಗೆ ಕೊಣೆಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಕೊಣೆಯಲ್ಲಿಟ್ಟಿದ್ದ ಸುಮಾರು 2200 ಬೆಲೆ ಬಾಳುವ ಅಡುಗೆ ಸಿಲಿಂಡರ್‌ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಮುಖ್ಯಶಿಕ್ಷಕರು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಾವಿಯಲ್ಲಿ ಬಿದ್ದು ಮಹಿಳೆ ಸಾವು
ಶಿಡ್ಲಘಟ್ಟ: 50 ವರ್ಷದ ಅಪರಿಚಿತ ಮಹಿಳೆಯೊಬ್ಬಳು ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ವಾರದ ಬಳಿಕ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೂದಗೂರಿನ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ರೇಷ್ಮೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ತೋಟದ ಪಾಳು ಬಿದ್ದ ಹಾಳು ಬಾವಿಯಲ್ಲಿ ಮಹಿಳೆಯೊಬ್ಬಳ ಶವ ಕೊಳೆತು ನಾರುವುದನ್ನು ಕಂಡ ನಾರಾಯಣಸ್ವಾಮಿ ತಕ್ಷಣ ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದೆ. ಮುಖ ಊದಿಕೊಂಡಿರುವುದರಿಂದ ಚಹರೆ ಗುರುತು ಹಿಡಿಯಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಂಡಿದ್ದು ತನಿಖೆ ಮುಂದುವರೆಸಲಾಗಿದೆ.