ಹೈನುಗಾರಿಕೆ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹ
ಬಾಗೇಪಲ್ಲಿ: ಹಾಲು ಉತ್ಪಾದಕರಿಗೆ ಬಾಕಿ ಉಳಿಸಿಕೊಂಡಿರುವ 2 ಗಳ ಪ್ರೋತ್ಸಾಹಧನ ಮತ್ತು ಹೊಸದಾಗಿ ಘೋಷಣೆ ಮಾಡಿರುವ 4 ಗಳ ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ್ಯ ಟಿ.ಲಕ್ಷ್ಮೀನಾರಾಯಣರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ಪ್ರತಿ ಲೀಟರ್ ಹಾಲಿಗೆ 2 ಗಳ ಪ್ರೋತ್ಸಾಹಧನ 2012ರ ಡಿಸೆಂಬರ್ ತನಕ ಮಾತ್ರ ಬಂದಿದ್ದು, ಜನವರಿಯಿಂದ ಇಲ್ಲಿಯವರೆಗೂ ಪಾವತಿಸಲಾಗಿಲ್ಲ. 2013ರ ಮೇ ನಲ್ಲಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ರಾಜ್ಯದ ಹಾಲು ಉತ್ಪಾದಕರಿಗೆ ಉಡುಗೊರೆಯಾಗಿ ಪ್ರತಿ ಲೀಟರ್ ಹಾಲಿಗೆ 4 ಗಳ ಪ್ರೋತ್ಸಾಹಧನ ನೀಡುವುದಾಗಿ ಘೋಷಣೆ ಮಾಡಿತು. ಆದರೆ, ಈ ಹಿಂದಿನ 2 ಮತ್ತು ನೂತನ 4 ಗಳ ಪ್ರೋತ್ಸಾಹಧನವು ಇದುವರೆಗೂ ರೈತರಿಗೆ ಸೇರಿಲ್ಲ.ಇದರಿಂದ ಸಿದ್ದು ನೀಡಿದ್ದ ನೂತನ ಗಿಫ್ಟ್ ಮತ್ತು ಈ ಹಿಂದಿನ ಪ್ರೋತ್ಸಾಹಧನ ಹಾಲು ಉತ್ಪಾದಕರ ಕೈಗೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪ್ರತಿ ಲೀಟರ್ ಹಾಲಿಗೆ 2 ರಿಂದ 4 ಗಳಿಗೆ ಹೆಚ್ಚಳ ಮಾಡುತ್ತಿದ್ದಂತೆ ರೈತರ ಹರ್ಷಕ್ಕೆ ಪಾರವೇ ಇರಲಿಲ್ಲ, ಇದರಿಂದ ಕೆಎಂಎಫ್ಗೆ ಬಹುತೇಕ ರೈತರು ಒಲವು ತೋರಿಸಿದ ಪರಿಣಾಮ ಕೆಎಂಎಫ್ಗೆ ಲಕ್ಷಾಂತರ ಲೀಟರ್ ಹಾಲು ಹರಿದುಬಂತು. ಆದರೆ, ಸಿದ್ದು ಸರ್ಕಾರ ಮಾತ್ರ ಈ ತನಕ ಪ್ರೋತ್ಸಾಹ ಧನವನ್ನು ಬಿಡುಗಡೆಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇಡೀ ರಾಜ್ಯದಲ್ಲಿಯೇ ಅತೀ ಹಿಂದುಳಿದ ಹಾಗೂ ಬರಪೀಡಿತ ತಾಲ್ಲೂಕುಗಳಲ್ಲಿ ಒಂದಾಗಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ 4 ವರ್ಷಗಳಿಂದ ಸತತವಾಗಿ ಮಳೆ ಬೆಳೆಯಿಲ್ಲದೆ ಬಹುತೇಕ ರೈತರು ನಗರ ಪ್ರದೇಶಗಳಿಗೆ ಗುಳೇ ಹೋಗುವಂತಹ ಪರಿಸ್ಥಿತಿ. ಬಾಗೇಪಲ್ಲಿ ತಾಲೂಕಿನಲ್ಲಿ ಸುಮಾರು 101 ಹಾಲು ಉತ್ಪಾದಕರ ಸಂಘಗಳು ಇದ್ದು ಪ್ರತಿ ನಿತ್ಯವೂ ಸಂಘಗಳಲ್ಲಿ ಹಾಲು ಉತ್ಪಾಧಕರು ಪ್ರೋತ್ಸಾಹಧನ ಬಗ್ಗೆ ವಿಚಾರಿಸುವುದು ಸಾಮಾನ್ಯ ಎಂದು ತಿಳಿಸಿದರು.
ಈ ಭಾಗದ ಬಹುತೇಕ ರೈತ ಕುಟುಂಬಗಳು ಹೈನುಗಾರಿಕೆಯಿಂದ ಹಾಲು ಉತ್ಪಾದಿಸುವ ಮೂಲಕ ತಮ್ಮ ಕುಟುಂಬಗಳ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಮಳೆ ಬೆಳೆಯಿಲ್ಲದೆ ಸೀಮೆ ಹಸು ಸೇರಿದಂತೆ ವಿವಿಧ ರೀತಿಯ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಜನರು ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮೇವಿನ ಕೊರತೆಯಿಂದ ಪರದಾಡುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರದಿಂದ ನೀಡುವಂತಹ ಜಾನುವಾರುಗಳ ಆಹಾರದ ಬೆಲೆ 750 ರಿಂದ 775ಕ್ಕೆ ಏರಿಕೆ ಮಾಡಿರುವುದು ಹೊರೆಯಾಗಿದೆ. ಇದರಿಂದ ಸರ್ಕಾರದಿಂದ ಬರುವಂತಹ ಪ್ರೋತ್ಸಾಹ ಹಣಕ್ಕಾಗಿ ಹಾಲು ಉತ್ಪಾದಕರು ಎದುರು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆಗೊಳಿಸಿದರೆ ರೈತರು ಸಂಕಷ್ಟದಿಂದ ಪಾರಾಗಬಹುದು ಎಂದರು. ಬರಗಾಲದಿಂದ ತತ್ತರಿಸುತ್ತಿರುವ ತಾಲೂಕಿನ ರೈತರು ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತಾಲೂಕಿನ ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯುವುದು ಸೇರಿದಂತೆ ಹೊಸ ಮತ್ತು ಹಳೆಯ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.