ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹೊಸ ಡಿಸಿ ನಿರೀಕ್ಷೆಯಲ್ಲಿ ಜನತೆ

Rashmi Kasaragodu
Updated On : 13 Aug 2013, 12:28 pm

ಕೋಲಾರ: ಜಿಲ್ಲೆಗೆ ವರ್ಗಾವಣೆಯಾಗಿರುವ ಹೊಸ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಸರ್ಕಾರದ ಆದೇಶಕ್ಕೆ ತಲೆ ಬಾಗಿ ಅಧಿಕಾರ ವಹಿಸಿಕೊಳ್ಳುವರೇ, ಇಲ್ಲವೇ ಹಿರಿಯ ಅಧಿಕಾರಿ ಜಿ.ಎಸ್.ಶಿವಸ್ವಾಮಿ ರೀತಿಯಲ್ಲಿ ಕೋಲಾರ ಜಿಲ್ಲೆಯ ಸಹವಾಸ ಬೇಡವೆಂದು ವರ್ಗಾವಣೆಯನ್ನು ರದ್ದು ಮಾಡಿಸಿಕೊಳ್ಳುವರೇ ಎಂದು ಜನತೆಯಲ್ಲಿ ಜಿಜ್ಞಾಸೆ ಮೂಡಿದೆ.
ಜು.17ರಂದು ಕೋಲಾರ ಜಿಲ್ಲಾಧಿಕಾರಿ ಡಾ. ಡಿ.ಎಸ್.ವಿಶ್ವನಾಥ್ ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇವರ ಜಾಗಕ್ಕೆ ನಿವೃತ್ತಿಯ ಅಂಚಿನಲ್ಲಿರುವ ಶಿವಸ್ವಾಮಿ ಎಂಬವರನ್ನು ವರ್ಗಾವಣೆ ಮಾಡಲಾಗಿತ್ತಾದರೂ ಕೋಲಾರಕ್ಕೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರಿಂದ ಡಿ.ಎಸ್.ವಿಶ್ವನಾಥ್ ಮುಂದುವರೆದಿದ್ದರು.
ಈ ನಡುವೆ ಬೆನ್ನು ನೋವಿನಿಂದಾಗಿ ಆ.1ರಿಂದ ರಜೆ ಪಡೆದಿದ್ದ ವಿಶ್ವನಾಥ್ ಅವರು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ.10ರಂದು ಸರ್ಕಾರ ಕೆಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಕೋಲಾರ ಡಿಸಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸ್ಥಾನಕ್ಕೆ ಬದಲಾಗಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.
ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಿ.ಕೆ.ರವಿ ಅವರನ್ನು ಕೋಲಾರಕ್ಕೆ ವರ್ಗಾವಣೆ ಮಾಡಲಾಗಿದೆ. ಈ ನೂತನ ಜಿಲ್ಲಾಧಿಕಾರಿ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡಿ ಕೋಲಾರಕ್ಕೆ ಬರುವರೇ ಇಲ್ಲವೇ ಜಿ.ಎಸ್.ಶಿವಸ್ವಾಮಿ ರೀತಿಯಲ್ಲಿ ವರ್ಗಾವಣೆ ರದ್ದು ಮಾಡಿಸಿಕೊಂಡು ಬೇರೆ ಕಡೆಗೆ ಹೋಗುವರೇ ಅಥವಾ ಹಾಲಿ ಇಲಾಖೆಯಲ್ಲಿ ಮುಂದುವರೆವರೇ ಎಂದು ಜನತೆ ನಿರೀಕ್ಷಿಸುತ್ತಿದ್ದಾರೆ.
ಒಂದೂವರೆ ತಿಂಗಳಿಂದ ಜಿಲ್ಲಾಧಿಕಾರಿಗಳ ರಜೆಯಿಂದಾಗಿ ಆಡಳಿತಕ್ಕೆ ಮಂಕು ಕವಿದಂತಾಗಿದೆ. ಜಿಲ್ಲೆಯಲ್ಲಿ ಜಾರಿ ಇರುವ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯದ ಪ್ರಗತಿ ಪರಿಶೀಲನೆ ಆಗಿಲ್ಲ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೃಷಿ ಸಚಿವ ಕೃಷ್ಣಬೈರೇಗೌಡರೇ ಕೋಲಾರ ಜಿಲ್ಲೆಯನ್ನು ಬರಪೀಡಿತ ಕೋಲಾರ ಜಿಲ್ಲೆ ಎಂದು ಪುನರ್‌ನಾಮಕರಣ ಮಾಡಬೇಕೆಂದು ಪ್ರತಿಪಾದಿಸಿದ್ದಾರೆ. ಹೀಗಿರುವಾಗ ಸರ್ಕಾರ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಯನ್ನು ಮುಂದುವರೆಸಲು ಇಲ್ಲವೇ ಹೊಸ ಡಿಸಿಗೆ ಅಧಿಕಾರ ಸ್ವೀಕರಿಸುವಂತೆ ಸ್ಪಷ್ಟ ಆದೇಶ ನೀಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸದಿದ್ದರೆ ಸರ್ಕಾರದ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಹಿನ್ನಡೆ ಆಗಬಹುದು ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement