ಅಕ್ರಮ ಮರಳು ಘಟಕಗಳ ಮೇಲೆ ದಾಳಿ
ಮುಳಬಾಗಿಲು-ಕೋಲಾರ: ಮುಳಬಾಗಿಲು ತಾಲೂಕಿನ ತಾಯಲೂರು ಹೋಬಳಿಗೆ ಸೇರಿದ ಪುಲಿಓಬಿರೆಡ್ಡಿಹಳ್ಳಿ, ಕಮ್ಮಸಂದ್ರ, ತುಳವನತ್ತ ಮುಂತಾದ ಗ್ರಾಮಗಳ ಸುತ್ತಮುತ್ತಲು ನಡೆಯುತ್ತಿದ್ದ ಅಕ್ರಮ ಮರಳು ಸಾಗಾಣಿಕಾ ಕೇಂದ್ರಗಳ ಮೇಲೆ ಮಂಗಳವಾರ ಕಂದಾಯ ಇಲಾಖೆಯವರು ದಾಳಿ ನಡೆಸಿದರು. ದಾಳಿಯ ವೇಳೆ ಪುಲಿಓಬಿರೆಡ್ಡಿಹಳ್ಳಿ ಗ್ರಾಮದಲ್ಲಿ ಶ್ರೀರಾಮರೆಡ್ಡಿ ಎಂಬುವರು ರಾಜಾರೋಷವಾಗಿ ಅಕ್ರಮ ಮರಳು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಆದರೆ ತಾವು ಇನ್ನು ಮುಂದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗುವುದಿಲ್ಲವೆಂದು ಮುಚ್ಚಳಿಕೆ ನೀಡಿದ ನಂತರ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಯಿತು. ಹಲವಾರು ಕಡೆ ಅಕ್ರಮ ವಿದ್ಯುತ್ ಸಂಪರ್ಕದ ಮೂಲಕ ಅಕ್ರಮ ಮರಳು ಕೇಂದ್ರಗಳನ್ನು ನಡೆಸುತ್ತಿರುವ ಬಗ್ಗೆ ಬೆಸ್ಕಾಂ ಇಲಾಖೆಯ ಗಮನಕ್ಕೆ ತಂದು ತಕ್ಷಣ ಕ್ರಮಕ್ಕೆ ಸೂಚಿಸಲಾಯಿತು. ದಾಳಿಯಲ್ಲಿ ತಹಶೀಲ್ದಾರ್ ಡಿ.ವಿ.ರಾಮಮೂರ್ತಿ, ಸಿಬ್ಬಂದಿ ರೆಡ್ಡಪ್ಪಗುಪ್ತ, ಸುಧಾಕರ್ ಮುಂತಾದವರು ಭಾಗವಹಿಸಿದ್ದರು.
ನಿರ್ದೇಶಕರ ಆಯ್ಕೆಗೆ ಚುನಾವಣೆ
ಚಿಂತಾಮಣಿ: ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಂಘಗಳ ಸಾಮಾನ್ಯ ಚುನಾವಣೆಯಲ್ಲಿ ನಿರ್ದೇಶಕ ಮಂಡಳಿ ಸದಸ್ಯರನ್ನು ಚುನಾಯಿಸಲು ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದೆ. ನಾಮಪತ್ರ ಸಲ್ಲಿಸಲು ಆ.17 ಕೊನೆ ದಿನ. 18ರಂದು ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. 19ರಂದು ಉಮೇದುವಾರಿಕೆ ವಾಪಾಸ್ ಪಡೆಯಲು ಕೊನೆ ದಿನ. ಸ್ಪರ್ಧಿಸಿರುವ ಅಭ್ಯರ್ಥಿಗಳ ಚಿಹ್ನೆಯೊಂದಿಗೆ ಪ್ರಕಟವಾಗುವ ಸಂಘಗಳಾದ ಬೂರಗಮಾಕಲಹಳ್ಳಿ, ಸಿದ್ದಿಮಠ, ಚಿಕ್ಕಕಟ್ಟಿಗೇನಹಳ್ಳಿ, ನಿಡುಗುರ್ಕಿ ಮತ್ತು ಚೊಕ್ಕನಹಳ್ಳಿ ಗ್ರಾಮಗಳಲ್ಲಿ ಆ.25ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆವರೆಗೆ ಆಯಾ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳಲ್ಲಿ ನೆರವೇರಿಸಲಿದೆ. ಫಲಿತಾಂಶ ಅದೇ ದಿನ ಪ್ರಕಟಿಸಲಾಗುವುದಾಗಿ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮಾಸಿಕ ವೇತನ ನೀಡಲು ಆಗ್ರಹ
ಚಿಂತಾಮಣಿ: ಪದವಿ ಪೂರ್ವ ಉಪನ್ಯಾಸಕರ ಮಾಸಿಕ ವೇತನ ಬಿಡುಗಡೆಗೊಳಿಸಲು ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿ.ಮುನಿರೆಡ್ಡಿ ಆಗ್ರಹಿಸಿದ್ದಾರೆ.ಉಪನ್ಯಾಸಕರಿಗೆ ಜುಲೈನ ಮಾಸಿಕ ವೇತನವು ಆ.13 ಕಳೆದರೂ ಬಿಡುಗಡೆ ಆಗಿರುವುದಿಲ್ಲ. ಕಾರಣ ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಲಾಖೆಯು (ಪೋಸ್ಟ್ ಕಂಟಿನ್ಯುಯೇಶನ್ ಆರ್ಡರ್) ಪತ್ರವನ್ನು ರಾಜ್ಯ ಎಲ್ಲಾ ಕಾಲೇಜುಗಳಿಗೆ ತಲುಪಿರುವುದಿಲ್ಲ. ಈಗಾಗಿ, ಖಜಾನೆ ಇಲಾಖೆ ಆದೇಶದ ನೆಪ ಹೂಡಿ ವೇತನ ತಡೆದಿದೆ. ಆದುದರಿಂದ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರು ಅಂತರ್ಜಾಲ ಮೂಲಕ ಆದೇಶ ಪ್ರತಿ ಬಿಡುಗಡೆಗೊಳಿಸಿ ಪ್ರತಿ ತಿಂಗಳೂ 5ನೇ ತಾರೀಖಿನೊಳಗೆ ವೇತನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.