ಕತ್ತೆಗಳಿಗೆ ಮದುವೆ ಮಾಡಲು ಮುಂದಾದ ಗ್ರಾಮೀಣರು
ಚಿಂತಾಮಣಿ: ಮಳೆ ಬಾರದೆ ರೈತ ಸಂಕಷ್ಟಕ್ಕೀಡಾಗಿ ವರುಣ ದೇವರಿಗಾಗಿ ಪ್ರಾರ್ಥಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿ ಮೆರವಣಿಗೆ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಪೂರ್ವ ಸಿದ್ಧತೆ ನಡೆಸಿದ್ದಾರೆ. ಆದರೆ, ವರುಣನ ಕೃಪಾ ಕಟಾಕ್ಷವಿಲ್ಲದ ಕಾರಣ ರೈತರು ಆತಂಕದಲ್ಲಿದ್ದಾರೆ.
ಗ್ರಾಮದ ಹಿರಿಯರ ಮಾತಿನಂತೆ ಹೆಣ್ಣು ಮತ್ತು ಗಂಡು ಕತ್ತೆಗಳನ್ನು ತಂದು ಮದುವೆ ಮಾಡಿ ಮೆರವಣಿಗೆ ಮಾಡಿದ್ದಲ್ಲಿ ಮಳೆ ಬರಬಹುದೆಂಬ ನಂಬಿಕೆಯಿಂದ ಗ್ರಾಮೀಣ ಹಳ್ಳಿಗಳಲ್ಲಿ ಹಲವರು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಉತ್ತಮ ಮಳೆಯಾಗಿ ನದಿಗಳು ತುಂಬಿ ಹರಿಯುತ್ತಿದ್ದರೂ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಮಳೆಯನ್ನೆ ಕಾಣದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಚಿಂತಾಮಣಿ ಪಟ್ಟಣದ ಡೈಮಂಡ್ ಟ್ಯಾಕೀಸ್ ರಸ್ತೆಯ ಹಿರಿಯ ರೈತ ನಾನಪ್ಪ ಕತ್ತೆಗಳ ಮದುವೆ ಮಾಡಲು ಈಗಾಗಲೇ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.