ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ಅವಶ್ಯ: ಗೌಹರ್
ಚಿಂತಾಮಣಿ: ಸರ್ಕಾರಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯ ಶಿಕ್ಷಕಿ ಗೌಹರ್ ಜಾನ್ ಹೇಳಿದರು. ತಾಲೂಕಿನ ದೊಡ್ಡಗಂಜೂರು ಗ್ರಾಮದಲ್ಲಿ ಮಂಗಳವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಸ ಎಸ್ಡಿಎಂಸಿ ಸದಸ್ಯರ ಆಯ್ಕೆ ಹಾಗೂ ಪ್ರಥಮ ಸಭೆ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಗೌಹರ್ ಜಾನ್ ನೂತನ ಸದಸ್ಯರ ಆಯ್ಕೆ ಪಟ್ಟಿಯನ್ನು ವಿವರಿಸಿ ಮಾತನಾಡಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಶಾಸಕರಾದ ಜೆ.ಕೆ. ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಶಾಲೆಗೆ ಹೊಸ ಮೆರಗು ನೀಡುವ ಮೂಲಕ ಪದ ನಿಮಿತ್ತ ನಾಮನಿರ್ದೇಶನ ಹಾಗೂ ಗ್ರಾಮ ಪಂಚಾಯ್ತಿ ತಾಲೂಕು ಪಂಚಾಯ್ತಿ ಸದಸ್ಯರು ಆಯ್ಕೆಯಾಗಿ ಶಾಲಾ ಅಭಿವೃದ್ಧಿ ಮಾಡಲು ಹಾಗೂ ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾಗಿ ಎಲ್ಲರೂ ಶ್ರಮಿಸಲು ಮುಂದಾಗಲು ಹೇಳಿದರು. ಸಭೆಯಲ್ಲಿ ಸದಸ್ಯರಾದ ಕೃಷ್ಣಾರೆಡ್ಡಿ, ನಾರಾಯಣಪ್ಪ ನಿವೃತ್ತ ಶಿಕ್ಷಕರು, ಎನ್.ರಮೇಶ್, ರಾಮಕೃಷ್ಣಪ್ಪ, ರಾಜಣ್ಣ, ಯಶೋಧಮ್ಮ, ಅಶ್ವತ್ಥಪ್ಪ, ಶ್ರೀನಿವಾಸ್, ರೆಹಮತ್ ಉಲ್ಲಾ, ಚಾಂದ್ ಪಾಷಾ, ನಾರಾಯಣಮೂರ್ತಿ, ಸಿ.ಚೌಡರೆಡ್ಡಿ, ವಿ.ಚೌಡರೆಡ್ಡಿ, ಚಂದ್ರಕಲಾ ಇದ್ದರು.
'ಅಂತರಗಂಗೆ ಪಾವಿತ್ರ್ಯತೆಗೆ ಧಕ್ಕೆ'
ಕೋಲಾರ: ನಗರದಿಂದ 3 ಕಿಮೀ ದೂರದಲ್ಲಿರುವ ಪುರಾಣ ಪ್ರಸಿದ್ಧ ಹಾಗೂ ದಕ್ಷಿಣ ಕಾಶಿ ಎಂದು ಖ್ಯಾತಿ ಪಡೆದಿರುವ ಅಂತರಗಂಗೆಯ ಪಾವಿತ್ರ್ಯತೆಗೆ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಜರಂಗದಳದ ಮುಖಂಡರು ಆಗ್ರಹಿಸಿದ್ದಾರೆ. ಅಂತರಗಂಗೆ ವ್ಯಾಪ್ತಿಯ ಜಲಕಂಠೇಶ್ವರ ಹಾಗೂ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಭಜರಂಗದಳದ ಮುಖಂಡರು, ಅರಿಶಿನ ನೀರು, ಪಂಚಗವ್ಯದಿಂದ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಕಳೆದ ಎರಡು ದಿನಗಳ ಹಿಂದೆ ಜಲಕಂಠೇಶ್ವರ ಸನ್ನಿಧಿಯಲ್ಲಿ ಮಾಂಸದ ಊಟ ತಯಾರಿಸಿ ಧಾರ್ಮಿಕ ಸ್ಥಳವನ್ನು ಅಪವಿತ್ರಗೊಳಿಸಲಾಗಿರುವುದರಿಂದ ಸ್ವಚ್ಛತಾ ಕಾರ್ಯ ನಡೆಸಿರುವುದಾಗಿ ತಿಳಿಸಿದ್ದಾರೆ. ಅಂತರಗಂಗೆ ಬೆಟ್ಟದ ಮೇಲಿನ ಪವಿತ್ರ ಗಂಗೆಯಲ್ಲಿ ಕೆಲವರು ಪಾದರಕ್ಷೆಯನ್ನು ತೊಳೆದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅಪಚಾರವೆಸಗಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರವಾಸಿ ಕ್ಷೇತ್ರದಲ್ಲಿ ಮೊದಲು ಪೊಲೀಸ್ ಹೊರಠಾಣೆ ಇತ್ತಾದರೂ ನಂತರದ ದಿನಗಳಲ್ಲಿ ತೆರವುಗೊಳಿಸಿ ಕೆಲವು ದುಷ್ಕರ್ಮಿಗಳ ದುರ್ವರ್ತನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಭಜರಂಗದಳದ ಮುಖಂಡ ಬಾಲಾಜಿ ದೂರಿದ್ದಾರೆ. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಭಜರಂಗದಳ ಮುಖಂಡ ಅಪ್ಪಿ ಆನಂದ್, ಬಾಬು, ರವಿ, ನರೇಶ್, ಚಿನ್ನಪ್ಪಿ, ಮತ್ತಿತರರು ಇದ್ದರು.