ಮಳೆರಾಯನ ಮಣ್ಣಿನ ಮೂರ್ತಿಗಳ ಪೂಜೆ
ಬಂಗಾರಪೇಟೆ: ಕ್ಷೇತ್ರವನ್ನು ಕಾಡುತ್ತಿರುವ ಬರದಿಂದ ಜನರು ನಾನಾ ಸಂಕಷ್ಟಗಳನ್ನು ಅನುಭವಿಸುತ್ತಿದ್ದು ಮಳೆರಾಯ ಕ್ಷೇತ್ರದ ಕಡೆ ಗಮನ ಹರಿಸಲೆಂದು ಗ್ರಾಮಸ್ಥರು ಮಳೆರಾಯನ 9 ಮಣ್ಣಿನ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ಪ್ರಸಂಗ ತಾಲೂಕಿನ ಕಣಿಂಬೆಲೆ ಗ್ರಾಮದಲ್ಲಿ ಮಂಗಳವಾರ ನಡೆಯಿತು. ಕಣಿಂಬೆಲೆ ಗ್ರಾಮಸ್ಥರು ಮಗಳವಾರ ಗ್ರಾಮದಲ್ಲಿ ಮಣ್ಣಿನಿಂದ ಮಾಡಿದ 9 ಮಳೆರಾಯನ ಮೂರ್ತಿಗಳನ್ನು ಹೊತ್ತು ಮನೆ ಮನೆಗೂ ತೆರಳಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ನಂತರ ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಮಳೆದೇವರ ಮೂರ್ತಿಗಳನ್ನು ಬಿಟ್ಟು ಎಲ್ಲರಿಗೂ ಅನ್ನ ಸಂತರ್ಪಣೆ ಮಾಡಿದರು. ಈ ಎಲ್ಲಾ ಕಾರ್ಯಗಳ ನೇತೃತ್ವವನ್ನು ಗ್ರಾಮದ ಮುಖಂಡರಾದ ಶ್ರೀನಿವಾಸ್, ಮಂಜು, ನಾರಾಯಣಪ್ಪ, ರಾಮಪ್ಪ ವಹಿಸಿದ್ದರು.