ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಟ್ಟೆಕೆಳಗಿನಪಾಳ್ಯದಲ್ಲಿ ಹಂದಿ ಮಾಂಸ ವಿಲೇವಾರಿ ಕಾಟ

Rashmi Kasaragodu
Updated On : 15 Aug 2013, 12:55 pm

ಶ್ರೀನಿವಾಸಪುರ:  ಪುರಸಭೆಯವರ ನಿರ್ಲಕ್ಷ್ಯದಿಂದ ಪಟ್ಟಣದ ವಲ್ಲಭ ಭಾಯಿ ರಸ್ತೆಯ ಕಟ್ಟೆ ಕೆಳಗಿನ ಪಾಳ್ಯದಲ್ಲಿ ಹಂದಿಗಳನ್ನು ಕೊಯ್ದು ಅಲ್ಲಿಯೇ ಮೂಳೆ ಮತ್ತಿತರ ತಾಜ್ಯ ಎಸೆಯಲಾಗುತ್ತಿದೆ. ಇದರಿಂದ ವಾತಾವರಣ ಕಲುಷಿತಗೊಂಡು ವಿವಿಧ ರೀತಿಯ ರೋಗಗಳು ಹರಡಲು ಕಾರಣವಾಗಿದೆ. ನಾಯಿಗಳ ಹಾವಳಿ ಹೆಚ್ಚಾಗಿದೆ.
ಲಕ್ಷಾಂತರ ರು. ಬೆಲೆ ಬಾಳುವಷ್ಟು ಸೀಮೆಹಸುಗಳು, ಕುರಿಗಳು ಸತ್ತು ಹೈನುಗಾರಿಕೆದಾರರು ಮತ್ತು ಕುರಿ ಸಾಕಾಣಿಕೆದಾರರು ತತ್ತರಿಸಿ ಹೋಗಿ ಆತಂಕದ ಪರಿಸ್ಥಿತಿ ಎದುರಿಸುವ ದುಸ್ಥಿತಿ ಏರ್ಪಟ್ಟಿದೆ.
ಪಟ್ಟಣದ ಕಟ್ಟೆಕೆಳಗಿನ ಪಾಳ್ಯದಲ್ಲಿ ಹಂದಿ ಮಾಂಸ ಮಾರಾಟಗಾರರು ಪರಿಸರ ಕಾಳಜಿ ಮರೆತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಕುರುಬರ ಕೃಷ್ಣಪ್ಪ ಎಂಬವರಿಗೆ ಸೇರಿದ 8 ಕುರಿಗಳು ಹಾಗೂ ಮತ್ತೊಬ್ಬರದು 4 ಕುರಿಗಳು ಸತ್ತಿವೆ. ಆಗ ಪಶು ವೈದ್ಯರಿಗೆ ವಿಷಯ ಮುಟ್ಟಿಸಿದಾಗ ಇಲ್ಲಿನ ಗಬ್ಬು ವಾಸನೆ, ಪರಿಸರ ಅನೈರ್ಮಲ್ಯತೆಯಿಂದಾಗಿ ಸಾಕು ಪ್ರಾಣಿಗಳಿಗೆ ರೋಗಗಳು ಹರಡಿ ಸಾಯುತ್ತೀವೆ. ಈ ಬಗ್ಗೆ ಸ್ಥಳೀಯ ವಾಸಿಗಳು  ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ. ಆದರೆ, ಕ್ರಮ ಮಾತ್ರ ಜರುಗದಿರುವುದರಿಂದ ಸಮಸ್ಯೆ ಗಂಭೀರವಾಗಿದೆ.
ಸೋಮವಾರ ಮಧ್ಯಾಹ್ನ ವೆಂಕಟೇಶರೆಡ್ಡಿ ಎಂಬವರ 75000 ಬೆಲೆ ಬಾಳುವ 2 ಸೀಮೆ ಹಸುಗಳು ಬಲಿಯಾದವು.  ಕಳೆದ 8 ದಿವಸಗಳ ಹಿಂದೆ ಗೇಟ್ ಬಾಬು ಎಂಬವರ 20000 ಮೌಲ್ಯದ ಹಸು ಸತ್ತು ಹೋಗಿತ್ತು. ಈ ಕಟ್ಟೆಕೆಳಗಿನ ಪಾಳ್ಯದಲ್ಲಿ ಈಗ ಇನ್ನು ಸುಮಾರು ಸೀಮೆ ಹಸುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳೂ ಅನಾರೋಗ್ಯಪೀಡತರಾಗುವ ಆತಂಕ ಎದುರಿಸುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಹಂದಿ ಸಾಕುವವರು, ಮಾಂಸ ಮಾರಾಟಗಾರರು ಪರಿಸರ ಪ್ರಜ್ಞೆ ಹೊಂದಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement