ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿಲ್ಲದೇ ಓಡಿದ ರೈಲು: ಟೇಕಲ್ ಜನರ ನಿರಾಶೆ

Rashmi Kasaragodu
Updated On : 15 Aug 2013, 12:45 pm

ಟೇಕಲ್:  ದಶಕಗಳ ಬೇಡಿಕೆಯಾಗಿದ್ದ ಮಾರಿಕುಪ್ಪಂ- ಬೆಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಈಡೇರಿತೆಂಬ ಖುಷಿಯಲ್ಲಿದ್ದ ಟೇಕಲ್ ಜನತೆ ಭಾನುವಾರ ಯೋಜನೆ ಶುರುವಾಗಿದ್ದರಿಂದ ಹಿರಿಹಿರಿ ಹಿಗ್ಗಿದ್ದರು. ಆದರೆ, ರೈಲು ಪ್ರಥಮ ದಿನವೇ ಟೇಕಲ್ ರೈಲು ನಿಲ್ದಾಣದಲ್ಲಿ ನಿಲ್ಲದೇ ಸಂಚರಿಸಿತು. ಇದರಿಂದ ಬಲೂನಿನಂತೆ ಉಬ್ಬಿದ್ದ ಟೇಕಲ್ ಜನತೆ ಈಗ ಗಾಳಿ ತೆಗೆದಂತಾಗಿದ್ದಾರೆ.
ಹೌದು. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರವಷ್ಟೇ ಮಾರಿಕುಪ್ಪಂನಿಂದ ಬೆಂಗಳೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲಿಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದ್ದರು. ಆದರೆ, ನೂತನವಾಗಿ ಪ್ರಾರಂಭಿಸಿರುವ ಮಾರಿಕುಪ್ಪಂ -ಬೆಂಗಳೂರು ಪ್ಯಾಸೆಂಜರ್ ರೈಲು ಟೇಕಲ್‌ನಲ್ಲಿ ನಿಲ್ಲುವುದಿಲ್ಲ. ಬದಲಿಗೆ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳೂ ಟೇಕಲ್‌ನಲ್ಲಿ ನಿಲುಗಡೆಯಾಗುತ್ತವೆ. ಇದರಿಂದ ಸಿಹಿ ಸುದ್ದಿ ಪಡೆದಿದ್ದ ಟೇಕಲ್ ಜನತೆಗೆ ಮತ್ತೆ ಕಹಿಸುದ್ದಿ ಪ್ರಾಪ್ತಿಯಾದಂತಾಗಿದೆ.
ಮುಂಜಾನೆ ಮಾರಿಕುಪ್ಪಂ ನಿಲ್ದಾಣವನ್ನು 4.45ಕ್ಕೆ ಬಿಟ್ಟ ರೈಲು ಕೋರಮಂಡಲ್, ಊರಿಗಾಂ, ಬೆಮಲ್‌ನಗರ್, ಬಂಗಾರಪೇಟೆಗಳಲ್ಲಿ ನಿಲುಗಡೆ ಮಾಡಿತ್ತು. ಆದರೆ, ಟೇಕಲ್‌ನಲ್ಲಿ ಮಾತ್ರ ನಿಲ್ಲುತ್ತಿಲ್ಲ ಏಕೆ? ಇದರಿಂದ ಜನತೆ ಬೇಸರದೊಂದಿಗೆ ಸರ್ಕಾರದ ಬಗ್ಗೆ ಸಂಶಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಟೇಕಲ್‌ನಿಂದ ದಿನವಹಿ 3000 ದಿಂದ  4000 ಜನ ಓಡಾಡುತ್ತಿದ್ದಾರೆ. ಈ ನೂತನ ರೈಲಿನಿಂದ ಬಹಳಷ್ಟು ಮಂದಿಗೆ ಉಪಕಾರವಾಗುತ್ತಿತ್ತು. ಆದರೆ, ರೇಲ್ವೆ ಇಲಾಖೆ ಏಕೆ ಈ ರೀತಿ ಮಾಡಿತು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.
ಒತ್ತಾಯ:  ಈ ನಿಟ್ಟಿನಲ್ಲಿ ದಿನನಿತ್ಯ ಓಡಾಡುವ ಪ್ರಯಾಣಿಕರು ಬೆಂಗಳೂರು ವಿಭಾಗೀಯ ರೇಲ್ವೆ ಇಲಾಖೆಯ ಅಧಿಕಾರಿಗಳಿಗೆ ಈ ಮುಖೇನ ಪತ್ರ ಬರೆದಿದ್ದು, ದಯಮಾಡಿ ಮಾರಿಕುಪ್ಪಂ- ಬೆಂಗಳೂರು ಮಾರ್ಗದ ನೂತನ ಪ್ಯಾಸೆಂಜರ್ ರೈಲು ಸೇವೆ ಟೇಕಲ್ ಜನತೆಗೆ ಲಭ್ಯವಾಗುವಂತೆ ಮಾಡಬೇಕಿದೆ. ಸಂಸದ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಈ ವಿಷಯದಲ್ಲಿ ಜನತೆಗೆ ನ್ಯಾಯ ಒದಗಿಸಬೇಕೆಂದು ಜನತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement