ರಾಷ್ಟ್ರಧ್ವಜ ದುಬಾರಿ, ವ್ಯಾಪಾರ ಹೆಚ್ಚಿಲ್ರಿ..
ಕೋಲಾರ: ಕಳೆದ ವರ್ಷಕ್ಕಿಂತ ಈ ಬಾರಿ ರಾಷ್ಟ್ರಧ್ವಜಗಳ ಬೆಲೆಯಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ. ಸ್ವಾತಂತ್ರ್ಯೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಈ ಬಾರಿ ಧ್ವಜಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ ಎಂದು ಧ್ವಜಗಳ ಮಾರಾಟಗಾರ ಸಾ.ಮ.ಪ್ರಸನ್ನ ತಿಳಿಸಿದ್ದಾರೆ. ನಮ್ಮಲ್ಲಿ 5 ರು.ಗಳಿಂದ 120 ರು.ವರೆಗಿನ ವಿವಿಧ ಅಳತೆಯ ರಾಷ್ಟ್ರಧ್ವಜಗಳನ್ನು ಮಾರಾಟಕ್ಕೆ ಇಡಲಾಗಿದೆ. ಜತೆಗೆ ಶಾಲಾ ಮಕ್ಕಳು ಆ.15 ರಂದು ಸ್ವಾತಂತ್ರ್ಯೋತ್ಸವ ಅಂಗವಾಗಿ ಭಾಗವಹಿಸುವ ಕಾರ್ಯಗಳಿಗೆ ಬಳಕೆ ಮಾಡುವ ಸಾಮಗ್ರಿಗಳು ಅಂದರೆ ರಿಬ್ಬನ್, ಕೈಗೆ ಧರಿಸುವ ಬ್ಯಾಂಡ್, ಪುಟ್ಟ ಮಕ್ಕಳಿಗಾಗಿ ಫೈಬರ್ನಿಂದ ತಯಾರಿಸಿರುವ ವಾದ್ಯ ಬೆಲೆಯು ಸಹ ಹೆಚ್ಚಾಗಿದ್ದು ಈ ಬಾರಿ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲವೆಂದು ಹೇಳಿದ್ದಾರೆ. ನಾವು ಪ್ರತಿವರ್ಷ ಬೆಂಗಳೂರಿನಿಂದ ಮಾಲು ತಂದು ಮಾರಾಟ ಮಾಡುತ್ತೇವೆ. ಅಂಗಡಿಗಳು ಹೆಚ್ಚಾಗಿರುವುದರಿಂದ ಹಾಗೂ ವ್ಯಾಪಾರಿಗಳ ನಡುವೆ ಪೈಪೋಟಿ ಇರುವುದರಿಂದ ಹೆಚ್ಚಿನ ಮಾರಾಟ ಹಾಗೂ ಲಾಭ ನಿರೀಕ್ಷೆ ಮಾಡಲಾಗುತ್ತಿಲ್ಲ, ಶೇಕಡ 50 ರಷ್ಟು ಮಾತ್ರ ಮಾರಾಟ ಮಾಡುತ್ತೇವೆ. ಉಳಿದದ್ದನ್ನು ಬೇರೆ ಸಂದರ್ಭಗಳಲ್ಲಿ ಮಾರಾಟ ಮಾಡಲಾಗುವುದೆಂದರು. ಬಾವುಟ ಖರೀದಿಗಾಗಿ ಬಂದಿದ್ದ ಬಿಜೆಪಿಯ ಮುಖಂಡ ಓಂಶಕ್ತಿ ಚಲಪತಿ, ಪ್ರತಿಯೊಬ್ಬರು ರಾಷ್ಟ್ರಧ್ವಜವನ್ನು ಖರೀದಿ ಮಾಡಿ ತಮ್ಮ ಮನೆ, ಅಂಗಡಿ, ಕಚೇರಿಗಳ ಮೇಲೆ ಹಾರಿಸುವ ಮೂಲಕ ದೇಶ ಪ್ರೇಮ ತೋರಬೇಕೆಂದರು. ಕೆಲವು ಬಾವುಟಗಳು ಕೇಸರಿ ಬಣ್ಣಕ್ಕೆ ಬದಲು ಕೆಂಪು ಬಣ್ಣದ್ದಾಗಿದೆ, ಧ್ವಜ ತಯಾರಕರು ಮತ್ತು ಮಾರಾಟಗಾರರು ಲೋಪ ಸರಿಪಡಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.