ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಕ್ತರು ಸಮಾನತೆ ವಾತಾವರಣ ನಿರ್ಮಿಸಿ ಅಶಕ್ತರ ಹಿತ ಕಾಪಾಡಲಿ ಡಾ. ಶಿವಪ್ರಸಾದ್

Rashmi Kasaragodu
Updated On : 15 Aug 2013, 12:51 pm

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಅಶಕ್ತರು ಸಹ ಅಭಿವೃದ್ಧಿ ಸಾಧಿಸಿ ಉತ್ತಮ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಶಕ್ತರು ಸಮಾಜದಲ್ಲಿ ಸಮಾನತೆಯ ವಾತಾವರಣ ನಿರ್ಮಾಣ ಮಾಡಿ ಅಶಕ್ತರ ಹಿತವನ್ನು ಪ್ರಾಮಾಣಿಕವಾಗಿ ಕಾಪಾಡುವಂತಹ ಜವಾಬ್ದಾರಿ ನಿರ್ವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಎನ್.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟದಲ್ಲಿ ಕರ್ನಾಟಕ ದಲಿತ ಸಂಘಷ ಸಮಿತಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಮಹಿಳಾ ಒಕ್ಕೂಟ, ದಲಿತ ಲೇಖಕರ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ಮೀಸಲಾತಿ ಜನಕ ಛತ್ರಪತಿ ಶಾಹುಮಹಾಜರಾಜ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ 75 ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶೋಷಿತರ ಕಲ್ಯಾಣಕ್ಕಾಗಿ ಹೋರಾಡಿದ ಸಂವಿಧಾನ ಶಿಲ್ಪಿ ಕೇವಲ ಒಂದು ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಇಡೀ ಸಮಾಜಕ್ಕೆ ಪ್ರೇರಕ ಶಕ್ತಿ. ಇಂತಹ ನಾಯಕರ  ನೆನೆಪಿನಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳು ಒಂದು ವರ್ಗದ ಜನರ ಮಧ್ಯೆ ಮಾತ್ರ ನಡೆಯಬಾರದು. ಎಲ್ಲಾ ವರ್ಗದ ಜನರನ್ನೂ ಸೇರಿಸಿಕೊಂಡು ಸ್ಮರಣೆ ಮಾಡಬೇಕು. ಆಗ ಮಹಾನ್ ನಾಯಕರಿಗೆ ನಿಜವಾದ ಗೌರವ ಲಭಿಸಿದಂತಾಗುತ್ತದೆ ಎಂದರು.
ರಾಜ್ಯ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಇಂದಿರಾ ಕೃಷ್ಣಪ್ಪ ಮಾತನಾಡಿ, ರಾಜಮನೆತನದಲ್ಲಿ ಹುಟ್ಟಿದ್ದರೂ ಶಾಹುಮಹಾರಾಜ್ ಅವರು ಶೋಷಿತ ವರ್ಗದ ಜನರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಪ್ರೊ. ಬಿ.ಕೃಷ್ಣಪ್ಪರವರು ಸಹ ಶಾಹುಮಹಾರಾಜ್‌ರನ್ನು ಆದರ್ಶವಾಗಿ ತೆಗೆದುಕೊಂಡು ದಲಿತ ಪರ ಚಳುವಳಿಯಲ್ಲಿ ತಮ್ಮನ್ನು ಹೆಚ್ಚಿಗೆ ತೊಡಗಿಸಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ.ಎನ್.ವಿ.ನರಸಿಂಹಯ್ಯ ಭಾರತದ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ, ಪ್ರೊ.ಮುನೀರ್ ಭಾಷರವರು ಪ್ರೊ. ಬಿ.ಕೃಷ್ಣಪ್ಪ ಮತ್ತು ದಲಿತ ಚಳವಳಿ, ಡಾ. ಅಪ್ಪಗೆರೆ ಸೋಮಶೇಖರ್ ಛತ್ರಪತಿ ಶಾಹುಮಹಾರಾಜ್ ಮತ್ತು ಸಾಮಾಜಿಕ ನ್ಯಾಯ, ಪ್ರೊ. ಕೋಡಿರಂಗಪ್ಪರವರು ಡಾ. ಅಂಬೇಡ್ಕರ್ ಮತ್ತು ಸಾಮಾಜಿಕ ಚಿಂತನೆ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್,ಮುಖಂಡರಾದ ಬೆಳ್ಳಂದೂರು ಮುನಿಯಲ್ಲಪ್ಪ, ನಾಗಣ್ಣ ಬಡಿಗೇರ, ರಮೇಶ್ ಡಾಕುಳಗಿ, ಸೋಮಶೇಖರ್, ಯಶವಂತಪ್ಪ, ಚಂದ್ರಶೇಖರ್, ರಂಗನಾಥ್ ಭಾಗವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement