ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲಾ ಆವರಣದಲ್ಲೇ ಗ್ರಾಮಸಭೆ: ಶಾಸಕ ನಾರಾಯಣಸ್ವಾಮಿ ತರಾಟೆ

Rashmi Kasaragodu
Updated On : 15 Aug 2013, 12:45 pm

ಕ.ಪ್ರ.ವಾರ್ತೆ  ಬಂಗಾರಪೇಟೆ  ಆ.14
ಗ್ರಾಮ ಸಭೆಯನ್ನು ಪಂಚಾಯ್ತಿ ಆವರಣದಲ್ಲಿ ಆಯೋಜಿಸದೆ ಶಾಲಾ ಆವರಣದಲ್ಲಿ ನಡೆಸುವ ಮೂಲಕ ಶಾಲಾ ಮಕ್ಕಳ ಪಾಠ ಪ್ರವಚನಗಳಿಗೆ ಅಡ್ಡಿ ಉಂಟು ಮಾಡಿದ ಘಟನೆ ಬುಧವಾರ ನಡೆಯಿತು.
ಗ್ರಾಮಸ್ಥರು ಗ್ರಾಮಗಳಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಅವರ ಸ್ಥಳದಲ್ಲೆ ಬಗೆಹರಿಸುವ ಸಲುವಾಗಿ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿವಳಿಕೆ ಮೂಡಿಸಲು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೈಗೊಂಡಿರುವ ಗ್ರಾಮಸಭೆ ಬುಧವಾರ ಆಲಂಬಾಡಿ ಜೋತೇನಹಳ್ಳಿ ಪಂಚಾಯ್ತಿ ಕೇಂದ್ರದಲ್ಲಿ ನಡೆಯಿತು. ಆದರೆ, ಇಲ್ಲಿ ಸಭೆ ಇರುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸದೆ ಆತುರಾತುರವಾಗಿ ಸಭೆಯನ್ನು ಅದು ಶಾಲೆ ಇರುವ ಸಮಯದಲ್ಲಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು ಶಾಸಕರನ್ನು ಹಾಗೂ ಗ್ರಾಮಸ್ಥರನ್ನು ಕೆರಳಿಸಿತು.
ಸಭೆ ಆರಂಭದಲ್ಲೇ ಶಾಸಕ ನಾರಾಯಣಸ್ವಾಮಿ ಗ್ರಾಮಸಭೆಯನ್ನು ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆ ಮಾಡಲು ನಿಮಗೆ ಬೇರೆ ಸ್ಥಳ ಸಿಗಲಿಲ್ಲವೆ? ಶಾಲಾ ಆವರಣದಲ್ಲಿ ಮಾಡುವುದರಿಂದ ಮಕ್ಕಳು ಹೇಗೆ ತಾನೆ ಪಾಠಗಳ ಕಡೆ ಗಮನಹರಿಸಲು ಸಾಧ್ಯ? ಎಂದು ಪಂಚಾಯ್ತಿ ಪಿಡಿಒ ಹಾಗೂ ಕಾರ್ಯದರ್ಶಿಗಳ ವಿರುದ್ಧ ತಿರುಗಿ ಬಿದ್ದರು. ಈ ಹಿಂದೆಯೇ ಶಾಲಾ ಆವರಣದಲ್ಲಿ ಗ್ರಾಮಸಭೆ ನಡೆಸಬಾರದು ಎಂದು ಸೂಚಿಸಿದ್ದರೂ ಸಹ ಮತ್ತೆ ಇಲ್ಲೇ ಹಮ್ಮಿಕೊಂಡಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಯಿತು.
ಪಂಚಾಯ್ತಿಯವರು ಶಾಸಕರಿಗೆ ಹಾರ ಹಾಕಿ ಸ್ವಾಗತಿಸಲು ಮುದಾದಾಗ ಅವರ ಸತ್ಕಾರವನ್ನೂ ಬಹಿಷ್ಕರಿಸಿದರು. ಇದೇ ಕೊನೆ ಮುಂದೆ ಶಾಲಾ ಆವರಣದಲ್ಲಿ ಗ್ರಾಮಸಭೆ ಮಾಡಿದರೆ ಪರಿಣಾಮ ನೆಟ್ಟಿಗಿರುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಕುಡಿಯುವ ನೀರು, ರೇಷನ್ ಕಾರ್ಡ್, ರಸ್ತೆಗಳು, ಪಿಂಚಣಿ ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಶಾಸಕರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಹುಕ್ಕುಂದ ಗ್ರಾಮದ ಬಳಿ ಅಕ್ರಮವಾಗಿ ಜೆಲ್ಲಿ ಕ್ರಷರ್ ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪ್ರತಿದಿನ ಕಿರಿಕಿರಿ ಉಂಟಾಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಿ ಕೂಡಲೆ ಜೆಲ್ಲಿ ಕ್ರಷರ್ ಸ್ಥಗಿತಗೊಳಬೇಕೆಂದು ಮನವಿ ಮಾಡಿದರು.
ಗ್ರಾಮಸ್ಥರಿಂದ ಅಹವಾಲು ಸ್ವಿಕರಿಸಿದ ನಂತರ ಮಾತನಾಡಿದ ಶಾಸಕ ನಾರಾಯಣಸ್ವಾಮಿ ಗ್ರಾಮಸಭೆ ಮಾಡುವ ಉದ್ದೇಶ ಸರ್ಕಾರದ ಯೋಜನೆಗಳು ಗ್ರಾಮಸ್ಥರಿಗೆ ಪರಿಚಯ ಮಾಡಿಕೊಡಲು ಹಾಗೂ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಲ್ಲಬೇಕೆಂಬ ಉದ್ದೇಶದಿಂದ ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಅವರು ಪಟ್ಟಣ ಪ್ರದೇಶಕ್ಕೆ ಬಾರದೆ ಅವರ ಸ್ಥಳದಲ್ಲೆ ಅಧಿಕಾರಿಗಳನ್ನು ಕರೆತಂದು ಇತ್ಯರ್ಥಪಡಿಸಲು ಸಭೆ ಉದ್ದೇಶವಾಗಿದ್ದರೆ ಇಲ್ಲಿ ಸಭೆ ಇರುವ ಬಗ್ಗೆ ಗ್ರಾಮಸ್ಥರಿಗೆ ತಿಳಿಸದೆ ಸಭೆ ಹಮ್ಮಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಅಧಿಕಾರಿಗಳ ವಿರುದ್ಧ ಮುನಿಸಿಕೊಂಡು ಜನರೇ ಇಲ್ಲದಿದ್ದರೆ ಸಭೆ ಮಾಡಿ ಏನು ಉಪಯೋಗ ಅಲ್ಲದೆ, ಅಧಿಕಾರಿಗಳು ತಮ್ಮ ಕೆಲಸ ಬಿಟ್ಟು ನನ್ನ ಹಿಂದೆ ಬಂದಿದ್ದಾರೆ ಅವರಿಗೆ ಮಾಡಲು ಕೆಲಸವಿಲ್ಲವೆ? ಸಭೆಗಳಿಗೆ ರಾಜಕೀಯ ಬೆರಸಬೇಡಿ ಎಂದು ಮನವಿ ಮಾಡಿ ಕೆಲವೆ ನಿಮಿಷಗಳಲ್ಲಿ ಸಭೆಯನ್ನು ಮುಗಿಸಿ ಹೊರಟರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ರೇಣುಕಾಬಾಲಚಂದ್ರ, ಉಪಾಧ್ಯಕ್ಷ ಸಂಪಂಗಿ ರೆಡ್ಡಿ, ಪಂಚಾಯ್ತಿ ಅಧ್ಯಕ್ಷ ನಾರಾಯಣಸ್ವಾಮಿ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ಮುಖಂಡ ರಾಮಪ್ಪ, ಇಒ ಜಗದೀಶ್, ಬಿಇಒ ಕೆ.ಜಯರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement