ಶಿರಸ್ತೇದಾರ್ ವಿರುದ್ಧ ದಸಂಸ ಪ್ರತಿಭಟನೆ
ಶಿಡ್ಲಘಟ್ಟ: ತಾಲೂಕು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ರಂಗನಾಥ್ ಪಡಿತರ ಚೀಟಿ ವಿತರಣೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕಿನ ದೂರದ ಹಳ್ಳಿಗಳಿಂದ ಬರುವ ದಲಿತರು, ಬಡವರು ಮತ್ತು ವೃದ್ಧರಿಗೆ ಪಡಿತರ ಚೀಟಿಗಳನ್ನು ಸರಿಯಾಗಿ ವಿತರಿಸುತ್ತಿಲ್ಲವೆಂದು ದೂರಿದರು. ಸಂಜೆ 6 ಗಂಟೆಯ ನಂತರ ಮಧ್ಯರಾತ್ರಿಯವರೆಗೂ ರಹಸ್ಯವಾಗಿ ಕೆಲಸ ಮಾಡಿ ಶ್ರೀಮಂತರಿಗೆ ರಾತ್ರೋರಾತ್ರಿ ಪಡಿತರ ಚೀಟಿಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಶಿರಸ್ತೇದಾರ್ ಅವರ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಆಹಾರ ಉಳಿಕೆಯಾಗಲೆಂಬ ಉದ್ದೇಶದಿಂದ ಪಡಿತರ ಕಾರ್ಡ್ಗಳನ್ನು ಸಕಾಲಕ್ಕೆ ವಿತರಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಇದೆ ಸಂದರ್ಭದಲ್ಲಿ ಆರೋಪಿಸಿದರು.
ಪ್ರತಿಭಟನೆ ನಂತರ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರೇಡ್ 2 ತಹಸೀಲ್ದಾರ್ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದಸಂಸ ಮುಖಂಡರಾದ ವೆಂಕಟೇಶ್, ಲಕ್ಷ್ಮಿನಾರಾಯಣ, ಎನ್.ಎಚ್.ವೆಂಕಟೇಶ್, ತಿರುಮಳಯ್ಯ, ಮಂಜುನಾಥ, ಗುರುಮೂತರ್, ನರಸಿಂಹಪ್ಪ, ನಾರಾಯಣಸ್ವಾಮಿ, ಗಂಗಾಧರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.