ಹಕ್ಕುಪತ್ರಕ್ಕೆ ಆಗ್ರಹಿಸಿ ಪುರಸಭೆ ಎದುರು ಪ್ರತಿಭಟನೆ
ಕ.ಪ್ರ.ವಾರ್ತೆ ಬಂಗಾರಪೇಟೆ ಆ.14
ಹತ್ತು ವರ್ಷಗಳಿಂದ ಇಂದಿರಾ ಆಶ್ರಯ ಬಡಾವಣೆಯಲ್ಲಿ ವಾಸ ಮಾಡುತ್ತಿರುವ ಬಡ ದಲಿತ ಹಾಗೂ ನಿರಾಶ್ರಿತ ಕುಟುಂಬಗಳಿಗೆ ಪುರಸಭೆ ಕೂಡಲೆ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಆಗ್ರಹಿಸಿ ದಲಿತ ಸಿಂಹ ಸೇನೆ ಮುಖಂಡರು ಬುಧವಾರ ಪುರಸಭೆ ಕಚೇರಿ ಎದುರಿ ಪ್ರತಿಭಟನೆ ಮಾಡಿದರು.
ಈ ಹಿಂದೆ ಪುರಸಭೆ ಬಸ್ ನಿಲ್ದಾಣ ಬಳಿ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದ ಕುಟುಂಬಗಳನ್ನು ಅಂದಿನ ಪುರಸಭೆ ಆಡಳಿತ ಮಂಡಳಿ ಪಟ್ಟಣ ಅಭಿವೃದ್ಧಿ ನೆಪದಲ್ಲಿ ಎಲ್ಲಾ ಗುಡಿಸಲು ವಾಸಿಗಳನ್ನು ತೆರವುಗೊಳಿ ಅವರಿಗೆ ಪರ್ಯಾಯವಾಗಿ ಇಂದಿರಾ ಆಶ್ರಯ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಿದರೆ ಹೊರತು ಇದುವರೆಗೂ ಹಕ್ಕು ಪತ್ರಗಳನ್ನು ನೀಡಿಲ್ಲ. ಅವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಮನೆ ಸಾಲ ಸಹ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು. ಕೂಡಲೆ ಅವರಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮನೆ ನಿರ್ಮಾಣಕ್ಕೆ ವಾಜಪೇಯಿ ಯೋಜನೆಯಲ್ಲಿ ಸಾಲ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಹಾಗೂ ಸ್ಥಳೀಯ ಶಾಸಕರು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಹಲವು ದಶಕಗಳಿಂದಲೂ ನೂರಾರು ಕುಟುಂಬಗಳು ಇನ್ನೂ ಗುಡಿಸಲುಗಳಲ್ಲೇ ವಾಸ ಮಾಡುತ್ತಿದ್ದರೂ ಅಧಿಕಾರಿಗಳ ಕಣ್ಣಿಗೆ ಬೀಳಲಿಲ್ಲವೆ ಎಂದು ಪ್ರಶ್ನಿಸಿ, ಕೂಡಲೇ ಶಾಸಕರು ಇಂತಹ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಹಾಗೂ ಇಂದಿರಾ ಆಶ್ರಯ ಬಡಾವಣೆಯಲ್ಲಿ ವಾಸವಿರುವ ಎಲ್ಲಾ ಕುಟುಂಬಗಳೂ ಕೂಲಿ ಕಾರ್ಮಿಕರಾಗಿದ್ದಾರೆ. ಇಲ್ಲಿ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ಆದ್ದರಿಂದ ಮೊದಲು ನಾಗರಿಕ ಅನುಕೂಲಗಳನ್ನು ಒದಗಿಸಿಕೊಡಲು ಪುರಸಭೆ ಮುಂದಾಗಬೇಕು ತಪ್ಪಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್, ನಗರ ಅಧ್ಯಕ್ಷ ಹುಣಸನಹಳ್ಳಿ ರಮೇಶ್,ಪಿಳ್ಳಪ್ಪ, ಕುಪೇಂದ್ರ, ಶ್ರೀಧರ್, ಮುನಿಸ್ವಾಮಿ, ಮಂಜುಳ, ಗೋವಿಂದ ಮೊದಲಾದವರಿದ್ದರು.