ಅಂಗನವಾಡಿಗಳಿಗೆ ಕಾನೂನು ಬಾಹಿರವಾಗಿ ಸಾಮಗ್ರಿ ಖರೀದಿ: ಲೋಕಾಯುಕ್ತರಿಗೆ ದೂರು
ಕನ್ನಡಪ್ರಭ ವಾರ್ತೆ ಕೋಲಾರ ಆ.15
ಅಂಗನವಾಡಿ ಕೇಂದ್ರಗಳಿಗೆ ವಿತರಿಸಲು 2011-12ನೇ ಸಾಲಿನಲ್ಲಿ ಪೀಠೋಪಕರಣ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲಾಗಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕಾನೂನು ಬಾಹಿರ ಖರೀದಿಗೆ ಅನುಮತಿ ನೀಡಿರುವ ಜಿ.ಪಂ ಸಿಇಓ ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಸಮಾಜ ಸೇವಕ ಬೆಳ್ಳೆಂಬರಿ ನಾಗರಾಜ್ ಎಂಬುವರು ಲೋಕಾಯುಕ್ತರಿಗೆ ಆ.14ರಂದು ಬುಧವಾರ ನೀಡಿರುವ ದಾಖಲೆ ಸಹಿತ ದೂರಿನಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಕಿರಣ್, ಜಿ.ಪಂ ಸಿಇಓ ಜುಲ್ಫಿಖಾರ್ ಉಲ್ಲಾ, ಈ ಹಿಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ಶೆಣೈ, ಪ್ರಧಮ ದರ್ಜೆ ಗುಮಾಸ್ತ ಕೃಷ್ಣಮೂರ್ತಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿಗಳನ್ನು ಸರಬರಾಜು ಮಾಡಿರುವ ಸನ್ಶೈನ್ ಸಂಸ್ಥೆಯ ಮಾಲೀಕರ ವಿರುದ್ಧ ಕ್ರಮ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ತಿಳಿಸಿದ್ದಾರೆ.
ಏನಿದು ಹಗರಣ: 2011-12ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೊದಿಕೆ, ಅಲ್ಮೇರ, ಗ್ಯಾಸ್ಸ್ಟವ್ ಇಡುವ ಸ್ಟೀಲ್ ಟೇಬಲ್ ಖರೀದಿ ಮಾಡಲಾಗಿತ್ತು. ಸಾಮಗ್ರಿಗಳನ್ನು ಟೆಂಡರ್ ಮೂಲಕ ಖರೀದಿ ಮಾಡುವುದಕ್ಕಾಗಿ ಪ್ರಕಟಣೆ ಹೊರಡಿಸಿದ್ದರಿಂದ ಕೋಲಾರ ತಾಲೂಕಿನ ಸನ್ಶೈನ್ ಸಂಸ್ಥೆಯವರು ಟೆಂಡರ್ನಲ್ಲಿ ಭಾಗವಹಿಸಿ ಸಾಮಗ್ರಿಗಳ ಸರಬರಾಜಿಗೆ ಅನುಮತಿ ಪಡೆದುಕೊಂಡಿದ್ದರು.
ಸಾಮಗ್ರಿಗಳ ಬಾಬ್ತಿನ ಹಣದ ಪೈಕಿ 60,06,400ಗಳ ಬಿಲ್ಲುಗಳನ್ನು ಸಾಮಗ್ರಿಗಳ ಸರಬರಾಜುದಾರ ಅಧಿಕಾರಿಗಳಿಗೆ ನೀಡಿದ್ದರು.
ಅಧಿಕಾರಿಗಳು ಈ ಪೈಕಿ 25,91,170 ರು. ಪಾವತಿಸಲಾಗಿತ್ತು.
ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿ.ಕೆ. ವೆಂಕಟೇಶ್ ಎಂಬುವರು ಆಗಿನ ಜಿ.ಪಂ ಸಿಇಒ ರಾಜೇಂದ್ರ ಚೋಳನ್ ಅವರಿಗೆ 2012ರ ಮೇ 28 ರಂದು ದೂರು ನೀಡಿದ್ದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದ ಚೋಳನ್, ಸದರಿ ಖರೀದಿ ಕಡತಗಳನ್ನು ತರಿಸಿಕೊಂಡು ತನಿಖೆಗಾಗಿ ಜಿ.ಪಂ ಸಹಾಯಕ ಯೋಜನಾಧಿಕಾರಿಗಳಿಗೆ ಸೂಚಿಸಿದ್ದರು. ಈ ಅಧಿಕಾರಿ ಸಲ್ಲಿಸಿದ ತನಿಖಾ ವರದಿಯಲ್ಲಿ ಟೆಂಡರ್ನಲ್ಲಿ ಅನುಮೋದಿಸಿರುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಪೂರೈಕೆ ಮಾಡುವುದಾಗಿ ಹೇಳಿ ಸಾಮಗ್ರಿಗಳು ಸರಬರಾಜು ಆಗುವ ಮುನ್ನವೇ ಬಿಲ್ಲುಗಳನ್ನು ಆಗ ಸಿಡಿಪಿಒ ಆಗಿದ್ದ ರವೀಂದ್ರ ಅವರಿಗೆ ಸಲ್ಲಿಸಿದ್ದರು.
ಸದರಿ ಸಿಡಿಪಿಒ ಬಿಲ್ಲುಗಳನ್ನು ಸ್ವೀಕರಿಸಿ ಸಾಮಗ್ರಿ ಸರಬರಾಜು ಮಾಡಿದ ನಂತರವೇ ಹಣ ಪಾವತಿ ಮಾಡುವುದಾಗಿ ಓಚರ್ಗಳಲ್ಲಿ ದೃಢೀಕರಿಸಿ, ಜಿಲ್ಲಾ ಖಜಾನೆಗೆ ಬಿಲ್ಲುಗಳನ್ನು 2012ರ ಮಾರ್ಚ್ 30 ಹಾಗೂ ಮಾ.31ರಂದು ಸಲ್ಲಿಸಿ, ಅದೇ ದಿನ 17,41,950 ಹಾಗೂ 8,49,220 ರು. ಗಳಿಗೆ ಚೆಕ್ಗಳನ್ನು ಪಡೆದುಕೊಂಡಿದ್ದರು.
ಕಾನೂನು ಪ್ರಕಾರ ಸಾಮಗ್ರಿಗಳ ಸರಬರಾಜು ಮುನ್ನ ಅದರ ಗುಣಮಟ್ಟವನ್ನು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಗುಣಮಟ್ಟ ಪರಿಶೀಲನಾ ದೃಢೀಕರಣ ಮಾಡಿಸಬೇಕಾಗಿತ್ತು. ಆದರೆ, ಸದರಿ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸರೆಡ್ಡಿ ಎಂಬುವರ ನಕಲಿ ಲೆಟರೆಡ್ ಬಳಸಿ ಅವರ ನಕಲಿ ಸಹಿ ಮಾಡಿ ಗುಣಮಟ್ಟ ಪರಿಶೀಲನಾ ಪತ್ರವನ್ನು ಸೃಷ್ಟಿಸಿ ಕೆಲವು ಚೆಕ್ಗಳನ್ನು ಸನ್ಶೈನ್ ಸಂಸ್ಥೆಯವರಿಗೆ ನೀಡಲಾಗಿದೆ ಎಂಬುದು ಬೆಳ್ಳಂಬರಿ ನಾಗರಾಜ್ ಅವರ ಆರೋಪವಾಗಿದೆ.
ಹಿಂದಿನ ಸಿಇಒ ರಾಜೇಂದ್ರ ಚೋಳನ್ ಅವರಿಗೆ ತನಿಖಾಧಿಕಾರಿ ನೀಡಿದ್ದ ವರದಿಯಲ್ಲಿ ಸರ್ಕಾರಕ್ಕೆ 28.98 ಲಕ್ಷ ರು.ನಷ್ಟವಾಗಿದೆ, ಕಳಪೆ ಸಾಮಗ್ರಿ ಖರೀದಿ ಮಾಡಲಾಗಿದೆ, ಪಾರದರ್ಶಕ ಕಾಯಿದೆಯಡಿ ಟೆಂಡರ್ಕ್ರೆದಿಲ್ಲವೆಂದು ತಿಳಿಸಿದ್ದರಿಂದ ಸಿಇಒ ಅವರು 2013ರ ಜೂ.20ರಂದು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿರ್ದೇಶಕಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸನ್ಶೈನ್ ಸಂಸ್ಥೆಯ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಅವಕಾಶ ಕೋರಿದ್ದರು.
ಈಗಾಗಲೇ ಪಾವತಿ ಮಾಡಿರುವ ಹಣವನ್ನು ಗುತ್ತಿಗೆದಾರನಿಂದ ಇಲ್ಲವೇ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳಿಂದ ವಸೂಲಿ ಮಾಡಬೇಕು, ಬಾಕಿ ಇರುವ 22,53,780 ಮತ್ತು 11,61,450 ರು. ಚೆಕ್ಗಳನ್ನು ಪಾವತಿಸದಂತೆ ಆದೇಶಿಸಿ ಆಗಿನ ರವೀಂದ್ರ ಅವರನ್ನು ಅಮಾನತು ಮಾಡಿದ್ದರು.
ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ಶೆಣೈ ಅವರು 2013ರ ಜ.1 ರಂದು ಹಾಲಿ ಜಿ.ಪಂ ಸಿಇಒ ಅವರಿಗೆ ಪ್ರಸ್ತಾವನೆ ಕಳುಹಿಸಿ ಸನ್ಶೈನ್ ಸಂಸ್ಥೆಯವರಿಗೆ ಬಾಕಿ ಇರುವ ಚೆಕ್ಗಳನ್ನು ಪಾವತಿಸಬೇಕೆಂದು ಕೋರಿರುವುದು ಕಾನೂನು ಪ್ರಕಾರ ತಪ್ಪಾಗಿದ್ದು ಸದರಿ ಪ್ರಕರಣದಲ್ಲಿ ಶಾಮೀಲು ಆಗಿರುವ ಹಾಲಿ ತಾಲೂಕು ಸಿಡಿಪಿಒ, ಕಚೇರಿ ಗುಮಾಸ್ತ ಹಾಗೂ ಇನ್ನಿತರ ಅಧಿಕಾರಿಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ಸರ್ಕಾರಕ್ಕೆ 28.92 ಲಕ್ಷ ರು. ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಳ್ಳಂಬರಿ ನಾಗರಾಜ್ ಮನವಿ ಮಾಡಿದ್ದಾರೆ.