ಈ ಬಾರಿ ವರಮಹಾಲಕ್ಷ್ಮೀ ಬಲು ದುಬಾರಿ
ಕ.ಪ್ರ.ವಾರ್ತ್ಣೆ ಕೋಲಾರ ಆ.15
ಪೂಜಾ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ವರ ಮಹಾಲಕ್ಷ್ಮೀ ಹಬ್ಬದ ಸಡಗರಕ್ಕೆ ಕೊಂಚ ಬ್ರೇಕ್ ಬಿದ್ದಂತಾಗಿದೆ.
ಯಾವುದೇ ಹಬ್ಬ ಬಂದರೂ ಹೂವು, ಹಣ್ಣು, ತರಕಾರಿ ಬೆಲೆಗಳು ಗಗನಕ್ಕೆ ಏರುವುದು ವಾಡಿಕೆಯಾಗಿದೆ. ಇದರಿಂದ ರೈತರಿಗೆ ಲಾಭವಾಗದಿದ್ದರೂ ವ್ಯಾಪಾರಿಗಳು ಜೇಬು ತುಂಬಿಸಿಕೊಳ್ಳುವುದರಲ್ಲಿ ನಿಸ್ಸಿಮರು.
ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲು ಆಗಿದ್ದಾರೆ ಬಾಳೆ ಎಲೆ, ವಿವಿಧ ಬಗೆಯ ಹೂವುಗಳು, ಹಣ್ಣು, ತರಕಾರಿಗಳ ಬೆಲೆ ಹೆಚ್ಚಳದಿಂದ ಹಬ್ಬವನ್ನು ಬಡವರು ಮಧ್ಯಮ ವರ್ಗದವರು ಸರಳವಾಗಿ ಆಚರಿಸುವಂತಾಗಿದೆ. ಉಳ್ಳವರು ಬೆಲೆ ಏರಿಕೆಯ ಕಡೆ ಗಮನ ನೀಡದೆ ಅದ್ಧೂರಿಯಾಗಿ ಹಬ್ಬ ಆಚರಿಸಲು ಸಕಲ ಸಿದ್ಧತೆ ಮಾಡುತ್ತಿದ್ದಾರೆ. ನಗರದ ದೊಡ್ಡಪೇಟೆ, ಬ್ರಾಹ್ಮಣರ ಬೀದಿ, ಸರ್ಕಾರಿ ಬಸ್ ನಿಲ್ದಾಣ ವೃತ್ತ, ಅಮ್ಮವಾರಪೇಟೆ, ಡಿ.ವಿ.ಜಿ.ರಸ್ತೆ ಸೇರಿದಂತೆ ಮುಂತಾದ ಕಡೆ ಹಣ್ಣು,ಹೂವು ಹಾಗೂ ಪೂಜಾ ಸಾಮಗ್ರಿಗಳು ಬೆಲೆ ಏರಿಕೆಯ ಬಿಸಿಯ ನಡುವೆಯೂ ಬಿರುಸಿನಿಂದ ಸಾಗಿದೆ.
ಬಾಳೆ ಎಲೆ ಕಂಬ ಒಂದು ಜೊತೆಗೆ 30 ರಿಂದ 200ರು.ಸೇವಂತಿಗೆ ಕೆಜಿಗೆ 240 ರಿಂದ 300, ಚಂಡು ಹೂವು ಕೆಜಿಗೆ 60 ರಿಂದ 65 ರು. ತಾವರೆ ಒಂದು ಜೊತೆಗೆ 20 ರಿಂದ 30, ಅಲಂಕಾರಿಕ ಹೂವುಗಳು ಒಂದು ಜೊತೆಗೆ 10 ರಿಂದ 15, ಮಾವಿನ ಸೊಪ್ಪು ಒಂದು ಕಟ್ಟಿಗೆ 5 ರಿಂದ 8, ತುಳಸಿ ಒಂದು ಮಳಕ್ಕೆ 10, ಸೇಬು 80 ರಿಂದ 100, ಬಾಳೆ ಹಣ್ಣು 1 ಕೆಜಿಗೆ 45 ರಿಂದ 70, ಮರ ಸೇಬು ಕೆಜಿಗೆ 50, ಅನಾನಸ್ ಒಂದಕ್ಕೆ 15 ರಿಂದ 20, ಮಲ್ಲಿಗೆ ಹೂವು 1 ಮಾರಿಗೆ 60 ರಿಂದ 85, ಬಟನ್ ರೋಜಾ ಹೂವು ಕೆಜಿಗೆ 80ರಿಂದ 120 ಹೀಗೆ ಎಲ್ಲ ರೀತಿಯ ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆ ಆಗಿದೆ.
ತರಕಾರಿ ಬೆಲೆ ಸಾಕಷ್ಟು ದುಬಾರಿ ಆಗಿದೆ. ಟೋಮೇಟೋ ಹೊರತುಪಡಿಸಿ ಉಳಿದ ಎಲ್ಲ ತರಕಾರಿಗಳ ಮೇಲೆ 3 ರಿಂದ 5 ರುಪಾಯಿ ಹೆಚ್ಚಳವಾಗಿದೆ. ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವುದರಿಂದ ಐಶ್ವರ್ಯ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಜನತೆ ಕೈಸುಡುತ್ತಿದ್ದರೂ ಹಬ್ಬ ಬಿಡದ ಪರಿಸ್ಥಿತಿಯಲ್ಲಿದ್ದಾರೆ.