ಕಪ್ಪು ಪಟ್ಟಿ ಧರಿಸಿ ತಾಪಂ ಸದಸ್ಯರ ಪ್ರತಿಭಟನೆ
ಕನ್ನಡಪ್ರಭ ಚಿಕ್ಕಬಳ್ಳಾಪುರ ಆ.15
ಜಿಲ್ಲಾಡಳಿತ ಹೊರಡಿಸಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರುಗಳನ್ನು ಪ್ರಕಟಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ತಾ.ಪಂ.ಸದಸ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ತಾ.ಪಂ.ಕಚೇರಿಯ ಆವರಣದಲ್ಲಿ ಗುರುವಾರ ಬೆಳಿಗ್ಗೆ ತಾ.ಪಂ.ಅಧ್ಯಕ್ಶ ಒಬಳೇಶಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿಂದೆ ಜಿಲ್ಲಾಡಳಿತ ಸ್ವಾತಂತ್ರ್ಯ ದಿನಾಚರಣೆಯ ಆಹ್ವಾನ ಪತ್ರಿಕೆಯಲ್ಲಿ ತಾ.ಪಂ. ಹೆಸರನ್ನು ಹಾಕಲಾಗುತ್ತಿತ್ತು. ತಾ.ಪಂ.ಅಧ್ಯಕ್ಷರು ಮತ್ತು ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ಅದೇಕೋ ಚಿಕ್ಕಬಳ್ಳಾಪುರ ತಾ.ಪಂ.ಅನ್ನು ನಿರ್ಲಕ್ಷ್ಯಿಸಿದೆ. ಈ ಮೂಲಕ ತಾ.ಪಂ.ಸದಸ್ಯರಿಗೆ ಅವಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ.ಕಚೇರಿಯಿಂದ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದ್ದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದತ್ತ ತೆರಳಲು ಯತ್ನಿಸಿದಾಗ ನಗರದ ಶಿಡ್ಲಘಟ್ಟ ವೃತ್ತದಲ್ಲಿ ತಡೆದು ಪೊಲೀಸರು ಸಮಾಧಾನಪಡಿಸಿದರು. ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಿನದಂದು ಯಾರೇ ಆಗಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಶ ಒಬಳೇಶಪ್ಪ, ಉಪಾಧ್ಯಕ್ಷೆ ಭಾರತಿ ದೇವಿ, ಸದಸ್ಯರಾದ ವೆಂಕಟನಾರಾಯಣಪ್ಪ, ಪಿ.ಸಿ. ಮೋಹನ್ ಮುಂತಾದವರು ಉಪಸ್ಥಿತರಿದ್ದರು
ಸಚಿವರಿಗೆ ಮುತ್ತಿಗೆ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಾಪಸಾಗುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದ ಘಟನೆ ನಡೆಯಿತು.
ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣಕ್ಕೆ ತೆರಳುವ ರೈಲ್ವೆ ಸ್ಟೇಷನ್ ರಸ್ತೆ ತುಂಬಾ ಹಾಳಾಗಿದೆ. ರಸ್ತೆಯಲ್ಲಿ ಹೆಚ್ಚಿಗೆ ತುಂಬಿ ತುಳುಕಾಡುತ್ತಿರುವ ಗುಂಡಿಗಳ ನಡುವೆ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಹಲವರು ರಸ್ತೆಯಲ್ಲಿ ಬಿದ್ದು ಗಾಯಗೊಂಡ ಘಟನೆಗಳು ಸಹ ನಡೆದಿವೆ. ಈ ನಡುವೆ ರಸ್ತೆಯ ಮಧ್ಯೆ ಬರುವ ರೈಲ್ವೆ ಹಳಿ ಸೇತುವೆಯ ಕೆಳಗೆ ನೀರು ಸಮರ್ಪಕವಾಗಿ ಹರಿಯುವುದಿಲ್ಲ. ಇದರಿಂದ ನೀರು ರಸ್ತೆಯೆಲ್ಲಾ ಹೆಚ್ಚಿಗೆ ನಿಂತುಕೊಂಡು ಸಣ್ಣ ಕುಂಟೆಯಂತೆ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಹಾಳಾಗಿರುವ ರಸ್ತೆಯನ್ನು ಸರಿಪಡಿಸಬೇಕು. ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿದ ಸಚಿವ ದಿನೇಶ್ ಗುಂಡೂರಾವ್, ತ್ವರಿತವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಗಲಗುರ್ಕಿ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.