ದೇಶಭಕ್ತಿ, ಬೆಳೆಸಲು ಕರೆ
ಚಿಂತಾಮಣಿ: ವಿದ್ಯಾರ್ಥಿಗಳು ದೇಶಭಕ್ತಿ ಮತ್ತು ದೇಶಾಭಿಮಾನ ಬೆಳೆಸಿಕೊಂಡು ದೇಶಕ್ಕೆ ಕೀರ್ತಿ ಗೌರವ ತರಲು ಶ್ರಮಿಸಬೇಕೆಂದು ಮುಖ್ಯ ಶಿಕ್ಷಕಿ ಮಂಜುಳ ಕರೆ ನೀಡಿದರು.
ಪಟ್ಟಣದ ಆಶ್ರಯ ಬಡಾವಣೆ ಬಳಿ ಇರುವ ಸರ್ಕಾರಿ ನೂತನ ಪ್ರೌಢಶಾಲೆಯಲ್ಲಿ 67 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಖ್ಯ ಅತಿಥಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವೆಂಕಟರಮಣರೆಡ್ಡಿ ಮಾತನಾಡಿ, ದೇಶದ ಐಕ್ಯತೆಗೆ ಎಲ್ಲಾ ಜಾತಿ ಧರ್ಮದ ಜನರು ಬೇಧಭಾವ ಮರೆತು ದೇಶದ ರಕ್ಷಣೆಗಾಗಿ ಶ್ರಮಿಸಬೇಕೆಂದರು. ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಶ್ರೀರಾಮರೆಡ್ಡಿ, ರೂಪೇಶ್,ಓಂಕಾರಪ್ಪ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾನೂನಿನ ಭಯವಿದ್ದರೆ ಅಪರಾಧ ಕಡಿಮೆ
ಚಿಂತಾಮಣಿ: ಪ್ರತಿ ಭಾರತೀಯರಲ್ಲೂ ದೇಶಭಕ್ತಿಯೊಂದಿಗೆ ಕಾನೂನಿನ ಭಯವಿದ್ದರೆ ಅಪರಾಧಗಳು ಕಡಿಮೆಯಾಗುತ್ತವೆ. ನಾವು ಮಾಡುವ ಪ್ರತಿ ಕಾರ್ಯವು ಭಾರತಮಾತೆಗೆ ಸಲ್ಲಿಸುವ ಅರ್ಪಣೆ ಎಂದು ಭಾವಿಸಬೇಕು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಹೇಳಿದರು. ತಾಲೂಕಿನ ಟಿ.ಹೊಸೂರು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಅವರು ಮಾತನಾಡಿದರು. ಇತಿಹಾಸದ ಅವಲೋಕನ ನಡೆಸಿದಾಗ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಅನೇಕ ಮಹಾತ್ಮರು ನಮ್ಮ ಕಣ್ಣೆದುರು ಬಂದು ನಿಲ್ಲುತ್ತಾರೆ. ಅಂತಹವರ ರಕ್ತತರ್ಪಣದಿಂದ ರೂಪಗೊಂಡ ಭಾರತವನ್ನು ನಾವು ಪ್ರೀತಿಸಬೇಕು. ರಾಷ್ಟ್ರಭಕ್ತಿ ಮೆರೆಯಬೇಕು ಎಂದರು. ರಾಷ್ಟ್ರವನ್ನು ಪ್ರೀತಿಸುವುದು ಎಂದರೆ ಭೌಗೋಳಿಕ ಪರಿಸರವನ್ನು ಮಾತ್ರವಲ್ಲ. ರಾಷ್ಟ್ರದ ಸಂಸ್ಕೃತಿ, ಸಾಹಿತ್ಯ ಸಮಗ್ರವಾಗಿ ಪ್ರೀತಿಸುವುದು ಎಂದು ಅರ್ಥ ಎಂದರು. ಧ್ವಜಾರೋಹಣ ತಾಪಂ ಸದಸ್ಯ ಕೃಷ್ಣಪ್ಪ ನೆರವೇರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಗಣೇಶ್, ನಿವೃತ್ತ ಶಿಕ್ಷಕ ಮುನಿಯಪ್ಪ, ವೆಂಕಟೇಶ್, ಗ್ರಾಮ ಪಂಚಾಯ್ತಿ ಸದಸ್ಯರು, ಎಸ್ಡಿಎಂಸಿ ಸದಸ್ಯರು ಇದ್ದರು. ಮುಖ್ಯೋಪಾಧ್ಯಾಯ ರವೀಂದ್ರ, ಶಿಕ್ಷಕ ಮಲ್ಲಪ್ಪ,ಜಯರಾಮ್,ಕೆ.ವಿ. ಗಾಯಿತ್ರಿ, ಧನಲಕ್ಷ್ಮಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.