ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 11000 ಕೋಟಿ ಉಳಿತಾಯ
ಕ.ಪ್ರ.ವಾರ್ತೆ ಕೆಜಿಎಫ್ ಆ.15
ಗ್ರಾಹಕರಿಂದ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಪ್ರಗತಿ ಗ್ರಾಮೀಣ ಬ್ಯಾಂಕ್ ಈಗ 11000 ಕೋಟಿ ಉಳಿತಾಯ ಮಾಡಿದೆ. ಇದಕ್ಕೆ ಮುಖ್ಯ ಕಾರಣ ದಿನೇದಿನೇ ಹೆಚ್ಚುತ್ತಿರುವ ಗ್ರಾಹಕರು ಎಂದು ಪ್ರಗತಿ ಗ್ರಾಮೀಣ ಬ್ಯಾಂಕ್ನ ಕೇಂದ್ರೀಯ ವಿಭಾಗದ ಅಧಿಕಾರಿ ಕುಮ್ಸಿಬಾಬು ತಿಳಿಸಿದರು. ಮಂಗಳವಾರ ಕೆಜಿಎಫ್ನ ಪ್ರಗತಿ ಗ್ರಾಮೀಣ ಬ್ಯಾಂಕ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಗ್ರಾಹಕರ ಸಮಾವೇಶ, ರಿಟೆಲ್ ಲೋನ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಗತಿ ಗ್ರಾಮೀಣ ಬ್ಯಾಂಕ್ ಇತರೇ ಬ್ಯಾಂಕ್ ಮಾದರಿಯಲ್ಲಿ ಅಭಿವೃದ್ಧಿಯಾಗಿದೆ. ಮೊಬೈಲ್ ಬ್ಯಾಂಕಿಂಗ್, ಆರ್ಜಿಎಸ್, ಎಟಿಎಂ ಸೌಲಭ್ಯ, ಖಾಸಗಿ ಹಾಗೂ ವಿದೇಶಿ ಬ್ಯಾಂಕ್ಗಳಲ್ಲಿ ಅಧುನಿಕ ತಂತ್ರಜ್ಞಾನದಲ್ಲಿ ಮಾನ್ಯತೆ ಪಡೆದಿದೆ ಎಂದರು.
ಸಣ್ಣ ಮತ್ತು ದೊಡ್ಡ ರೈತರಿಗೆ ಸಾಲ, ಉದ್ಯಮಿಗಳಿಗೆ ಉತ್ತಮ ಸಾಲ ಯೋಜನೆ ಕೈಗೊಂಡಿದೆ. ವಿಂಡ್ ಮಿಲ್ಗಳಿಗೆ ಸುಮಾರು 50 ರಿಂದ 60 ಕೋಟಿವರೆಗೆ ಸಾಲ ನೀಡುವ ವ್ಯವಸ್ಥೆ ಪ್ರಗತಿ ಗ್ರಾಮೀಣ ಬ್ಯಾಂಕ್ ಹೊಂದಿದೆ. ಈಗಾಗಲೇ ತಮ್ಮ ಬ್ಯಾಂಕ್ 36 ಲಕ್ಷ ಮಂದಿ ಗ್ರಾಹಕರನ್ನು ಹೊಂದಿದೆ ಎಂದರು.
ಕೋಲಾರ ಜಿಲ್ಲಾ ಪ್ರಗತಿ ಬ್ಯಾಂಕ್ನ ವ್ಯವಸ್ಥಾಪಕ ರವೀಂದ್ರ ಮಾತನಾಡಿ, ಕೆಜಿಎಫ್ ಕ್ಷೇತ್ರದ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ 1 ಕೋಟಿ ವರೆಗೆ ಸಾಲ ನೀಡಲಾಗಿದೆ. ಬ್ಯಾಂಕ್ ಮತ್ತು ಗ್ರಾಹಕರ ಮಧ್ಯೆ ಆರ್ಥಿಕ ವ್ಯವಹಾರ ಉತ್ತಮವಾಗಿರಬೇಕು. ಇದರಿಂದ ಅಭಿವೃದ್ಧಿ ಸಾಧ್ಯ ಎಂದರು.
ಬ್ಯಾಂಕ್ ಗ್ರಾಹಕ ಕೃಷ್ಣಪ್ಪ ಸೇರಿದಂತೆ ಹಲವಾರು ಗ್ರಾಹಕರು ಬ್ಯಾಂಕ್ನ ಸೇವೆಗಳ ಬಗ್ಗೆ ಹಾಗೂ ಕುಂದು ಕೊರತೆ ಬಗ್ಗೆ ವಿವರಿಸಿದರು. ಬ್ಯಾಂಕ್ನಲ್ಲಿ ಸಿಬ್ಬಂದಿ ಕೊರತೆ ಇದೆ. ಕೂಡಲೆ ಅಗತ್ಯ ವಿರುವ ಸಿಬ್ಬಂದಿ ನೇಮಿಸಬೇಕು. ಇದರಿಂದ ಬ್ಯಾಂಕ್ಗೆ ಬರುವ ಗ್ರಾಹಕರಿಗೆ ಸಮಯ ಹಾಗೂ ಇತರೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಒಂದೇ ದಿನದಲ್ಲಿ ಒಟ್ಟು 39 ಗ್ರಾಹಕರಿಗೆ 1.45 ಕೋಟಿ ಸಾಲವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಪಿ.ದಯಾನಂದ್, ಬ್ಯಾಂಕ್ ವ್ಯವಸ್ಥಾಪಕ ಕೆ.ಎಂ.ಬಸವರಾಜು ಸಿಬ್ಬಂದಿಗಳಾದ ವಿಜಯಕುಮಾರ್, ಕೊಟ್ರಯ್ಯ, ನಾರಾಯಣಪ್ಪ, ಗೀತಾ, ಲೋಕೇಶ್, ಮಣಿ, ಮೂರ್ತಿ, ಗ್ರಾಮೀಣ ಭಾಗದ ಮುಖಂಡರು ಮಹಿಳೆಯರು, ಸ್ತ್ರೀಶಕ್ತಿ ಸಂಘದ ಮಹಿಳೆಯರು ನೂರಾರೂ ಗ್ರಾಹಕರು ಹಾಜರಿದ್ದರು.