'ಉತ್ತಮ ಫಲಿತಾಂಶ ಬಂದಲ್ಲಿ ಪ್ರಾಂಶುಪಾಲರಿಗೆ ಸನ್ಮಾನ'
ಟೇಕಲ್: ಈ ಬಾರಿ ಸ್ಥಳೀಯ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮವಾಗಿ ಬಂದರೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಜಿಪಂ. ಕ್ಷೇತ್ರದ ಸದಸ್ಯೆ ರತ್ನಮ್ಮ ನಂಜೇಗೌಡ ನುಡಿದರು.
ಅವರು ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 2011-2012ರ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕ ವೃಂದಕ್ಕೆ ಶಾಲೂ ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಅವರು ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ನನ್ನ ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮುಂದಿನ ವಾರ 5 ಸಾವಿರ, 1 ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ಲೋಟ ನೀಡುತ್ತಿರುವುದಾಗಿ ಅದೇ ದಿನ ಜಿ.ಪಂ. ವತಿಯಿಂದ 15 ಲಕ್ಷ ರು. ವೆಚ್ಚದ 2 ಓವರ್ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಶಾಸಕ ಮಂಜುನಾಥಗೌಡರಿಂದ ನೆರವೇರಲಿದೆ ಎಂದು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ ಕಾಲೇಜಿನ ಹಿಂಭಾಗದಲ್ಲಿರುವ ಸ್ಥಳದ ಬಗ್ಗೆ ಶಾಲಾಭಿವೃದ್ಧಿ ಸಮಿತಿಯವರು ಚರ್ಚಿಸಿ ಶಿಕ್ಷಣ ಇಲಾಖೆಗೆ ಬರೆದರೆ ಶಾಸಕ ಮಂಜುನಾಥಗೌಡರ ವತಿಯಿಂದ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಆ ಸ್ಥಳವನ್ನು ಶಾಲೆಗೆ ಸೂಕ್ತವೆಂದು ನೀಡಲಾಗುವುದು ಎಂದರು.
ತಾಪಂ ಸದಸ್ಯೆ ನಿರ್ಮಲ ಆಂಜಿನಪ್ಪ ತಾ.ಪಂ. ವತಿಯಿಂದ ಕಾಲೇಜಿನ ಕಾಂಪೌಂಡ್ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿ.ಪಂ. ಮಾಜಿ ಸದಸ್ಯ ಆರ್. ರಾಜಣ್ಣ, ಎಸ್.ಬಿ.ಸಿ. ಕಮಿಟಿ ಅಧ್ಯಕ್ಷ ಕೆ.ಬಿ. ನಾರಾಯಣಸ್ವಾಮಿ, ಮಾತನಾಡಿದರು. ಅಧ್ಯಕ್ಷತೆ ಪ್ರಾಂಶುಪಾಲ ಎ.ಕೆ. ಪಾಪಣ್ಣ ವಹಿಸಿದ್ದು ಸಭೆಯಲ್ಲಿ ಉಪಪ್ರಾಂಶುಪಾಲ ಎಂ.ವಿ. ವೆಂಕಟೇಶಪ್ಪ, ತಾ.ಪಂ. ಸದಸ್ಯೆ ಮಂಜುಳಾವೆಂಕಟೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟಪತಿ, ಗ್ರಾ.ಪಂ. ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರಪ್ಪ, ವೀರಣ್ಣ, ಮುನಿಯಪ್ಪ ಹಾಗೂ ಸ್ವಾತಂತ್ರ್ಯೋತ್ಸವದ ಬಗ್ಗೆ ಮುಖ್ಯ ಶಿಕ್ಷಕ ಬಿ.ಎಂ. ಚಂದ್ರಪ್ಪನವರು ಮಕ್ಕಳಿಗೆ ತಿಳಿಸಿಕೊಟ್ಟರು. ಸಭೆಯಲ್ಲಿ ಹಳೇ ವಿದ್ಯಾ
ರ್ತಿ ಸಂಘದ ಶಂಭೂಪ್ರಸಾದ್ ಅವರು ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 4 ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರು. ಬಹುಮಾನ ನೀಡಿದರು.