ಜಿಲ್ಲಾ ಕ್ರೀಡಾಂಗಣ ಬಳಕೆಯಲ್ಲಿ ರಾಜಕೀಯ!
ಚಿಕ್ಕಬಳ್ಳಾಪುರ: ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಅನುಕೂಲವಾಗುವಂತೆ ಸರ್ಕಾರಿ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿರುವ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಬಳಕೆಯಲ್ಲಿ ರಾಜಕೀಯ ನುಸುಳಿರುವುದು ಜಿಲ್ಲೆಯ ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅವಕಾಶ ನೀಡದೆ ಕ್ರೀಡೆಗಳಿಗೆ ಮಾತ್ರ ಸೀಮಿತವನ್ನಾಗಿಸಬೇಕೆಂಬ ಒತ್ತಾಯ ಕ್ರೀಡಾಪಟುಗಳಿಂದ ಕೇಳಿ ಬಂದಿದೆ.
ಜಿಲ್ಲಾ ಕೇಂದ್ರದಲ್ಲಿರುವ ಕ್ರೀಡಾಂಗಣವು ಕ್ರೀಡಾಪಟುಗಳಿಗೆ ತಮಗೆ ಇಷ್ಟವಾದ ಕ್ರೀಡೆಗಳನ್ನು ಅಡಲು ಅಚ್ಚುಮೆಚ್ಚಿನ ಸ್ಥಳವಾಗಿದೆ. ಇಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಅನೇಕ ತಂಡಗಳು ಕ್ರಿಕೆಟ್, ಫುಟ್ಬಾಲ್, ಮತ್ತಿತರೆ ಕ್ರೀಡೆಗಳ ಅಭ್ಯಾಸದಲ್ಲಿ ತೊಡಗಿರುತ್ತಾರೆ.
ಇನ್ನೂ ಹೆಚ್ಚಿಗೆ ಅನೇಕ ಕ್ರೀಡಾಪಟುಗಳು ರನ್ನಿಂಗ್ ಸ್ಪರ್ಧೆಗೆ ತಯಾರಿ ನಡೆಸುತ್ತಿರುತ್ತಾರೆ. ಈ ನಡುವೆ ಪುರುಷರು, ಮಹಿಳೆಯರು, ವೃದ್ಧರು ಸೇರಿದಂತೆ ಹಲವರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ವಾಕಿಂಗ್ ಮೂಲಕ ಮೈದಾನದಲ್ಲಿ ಸುತ್ತು ಹಾಕುತ್ತಾರೆ. ಪ್ರಮುಖವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಗಾಗ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಕ್ರೀಡಾಂಗಣವು ಪ್ರತಿನಿತ್ಯ ಕ್ರೀಡಾಪಟುಗಳು, ಜನರಿಂದ ತುಂಬಿ ತುಳುಕಾಡುತ್ತಿರುತ್ತದೆ. ಇಂತಹ ಕ್ರೀಡಾಂಗಣದಲ್ಲಿ ಖಾಸಗೀ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ತೋರುತ್ತಿರುವ ಏಕಪಕ್ಷೀಯ ವರ್ತನೆಯು ಇದೀಗ ಪ್ರಶ್ನಿಸುವಂತೆ ಮಾಡಿದೆ.
ಕೆಲವರಿಗೆ ಮಾತ್ರ ಮಣೆ: ಸಾಮಾನ್ಯವಾಗಿ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜನ ಸಾಮಾನ್ಯರು, ಸಂಘ ಸಂಸ್ಥೆಗಳು, ಧಾರ್ಮಿಕ ದತ್ತಿಗಳು ಅನುಮತಿಯನ್ನು ಕೇಳಿದಾಗ ಕ್ರೀಡಾಂಗಣವು ಹಾಳಾಗುತ್ತದೆ ಎಂಬ ನೆಪವೊಡ್ಡಿ ಜಿಲ್ಲಾಡಳಿತ ನಿರಾಕರಿಸುತ್ತದೆ. ಆದರೆ, ರಾಜಕೀಯ ಮುಖಂಡರು ತಮ್ಮ ಪಕ್ಷದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದಾದಾಗ ಮಾತ್ರ ತಟಸ್ಥವಾಗಿರುತ್ತದೆ ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ದುರ್ಬಳಕೆ: ಇದಕ್ಕೆ ನಿದರ್ಶನವಾಗಿ ಕಳೆದ ಜನವರಿ ತಿಂಗಳಿನಲ್ಲಿ ಕಾಂಗ್ರೆಸ್ನ ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಲು ಕ್ರೀಡಾಂಗಣ ಬಳಕೆ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕ್ರೀಡಾಪಟುಗಳು ಕ್ರೀಡಾಂಗಣದಿಂದ ಕೆಲ ದಿನಗಳ ಕಾಲ ದೂರ ಉಳಿದು ಬೇರೆ ಕಡೆ ಕ್ರೀಡೆಗಳನ್ನಾಡಬೇಕಾಯಿತು.
ಅಲ್ಲದೆ, ಕ್ರೀಡಾಂಗಣದಲ್ಲಿ ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬೀಸಾಡಿ ಹೋಗಿದ್ದು ಮಾತ್ರ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ರೀತಿ ನಂತರ ಸಹ ಮೈದಾನ ಹಾಳಾಗುವಂತಹ ಕಾರ್ಯಕ್ರಮಗಳು ನಡೆದರೂ ಸಹ ಪ್ರಶ್ನಿಸುವ ಮನೋಭಾವನೆ ತೋರಲಿಲ್ಲ. ಆದರೆ, ಧಾರ್ಮಿಕ ಕಾರ್ಯಕ್ರಮವೊಂದರ ಆಚರಣೆಗೆ ಮುಂದಾದ ಸಂದರ್ಭದಲ್ಲಿ ಮಾತ್ರ ಕ್ರೀಡಾಂಗಣ ಹಾಳಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿ, ಅನುಮತಿಯನ್ನು ನೀಡಲು ನಿರಾಕರಿಸಿ ತಾರತಮ್ಯ ನೀತಿಯನ್ನು ಅನುಸರಿಸಿದ್ದು ಮಾತ್ರ ಭಕ್ತಾದಿಗಳು ಸೇರಿದಂತೆ ಅನೇಕರನ್ನು ಕೆರಳಿಸಿದೆ.
ಕ್ರೀಡಾಪಟುಗಳು ಒತ್ತಾಯ: ಜಿಲ್ಲಾ ಕ್ರೀಡಾಂಗಣದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಧ ಕ್ರೀಡಾಕೂಟ ಆಯೋಜಿಸಲು ಒಳಾಂಗಣ ಕ್ರೀಡಾಂಗಣ ಕಟ್ಟಲಾಗಿದೆ. ಅಭ್ಯಾಸಕ್ಕಾಗಿ ಪಿಚ್ ನಿರ್ಮಾಣ ಮಾಡಲಾಗಿದೆ. ಇನ್ನೂ ಇಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಎನ್ನುವಂತಹ ಈಜುಕೊಳ ಇದೆ.
ಈ ನಿಟ್ಟಿನಲ್ಲಿ ಅನುದಾನವೂ ಹರಿದು ಬರುತ್ತಿದ್ದು ಜಿಲ್ಲಾಡಳಿತ ಖಾಸಗೀ ಕಾರ್ಯಕ್ರಮಗಳ ಆಯೋಜನೆಯಿಂದ ಮೈದಾನ ಹಾಳಾಗದಂತೆ ನೋಡಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಕ್ರೀಡೆಗಳನ್ನಾಡಲು ಸಾಧ್ಯವಾಗದೇ ಕ್ರೀಡಾಪಟುಗಳು ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕು. ಪ್ರಮುಖವಾಗಿ ರಾಜಕೀಯ ಪ್ರಭಾವಕ್ಕೆ ಕ್ರೀಡಾಂಗಣ ದುರ್ಬಳಕೆಯಾಗುವುದಕ್ಕೆ ಕಡಿವಾಣ ಹಾಕಬೇಕೆಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.