ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹಿಳೆ ದಿಢೀರ್ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಸಂಬಂಧಿಕರ ಆಕ್ರೋಶ

Rashmi Kasaragodu
Updated On : 17 Aug 2013, 1:07 am

ಚಿಕ್ಕಬಳ್ಳಾಪುರ: ಸಮರ್ಪಕವಾಗಿ ವೈದ್ಯರು ಚಿಕಿತ್ಸೆ ನೀಡದ ಕಾರಣ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಸಂಬಂಧಿಕರು ಮತ್ತು ಗ್ರಾಮಸ್ಥರು ಖಾಸಗಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ನಗರದ ಶಿಡ್ಲಘಟ್ಟ ವೃತ್ತದಲ್ಲಿರುವ ಜೀವನ್ ಆಸ್ಪತ್ರೆಯಲ್ಲಿ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಇದ್ದಕಿದ್ದಂತೆ ಮೃತಪಟ್ಟಿದ್ದು ರಂಪಾಟಕ್ಕೆ ಕಾರಣವಾಯಿತು. ತಾಲೂಕಿನ ಕತ್ರಿಗುಪ್ಪೆಯ ಚಂದ್ರಕಲಾ ( 25 ವರ್ಷ)ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಈ ಕಾರಣದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದರು. ಈ ನಡುವೆ ಜೀವನ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಶುಕ್ರವಾರ ಇಲ್ಲಿನ ವೈದ್ಯರು ಮಾತ್ರೆ ಕೊಟ್ಟು ಕಳುಹಿಸಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ಎದೆನೋವು ಎಂದು ಚಂದ್ರಕಲಾ ಮತ್ತೆ ಆಸ್ಪತ್ರೆಗೆ ಬಂದಿದ್ದು ವೈದ್ಯರು ಕೇವಲ ಗುಕ್ಲೋಸ್ ಕೊಟ್ಟು ಸಾಮಾನ್ಯ ರೋಗಿಯಂತೆ ನೋಡಿಕೊಂಡರು. ಇಸಿಜಿ ಸ್ಕ್ಯಾನ್ ಮಾಡಲಿಲ್ಲ. ಎದೆನೋವಿಗೆ ಕಾರಣ ಏನೆನ್ನುವುದನ್ನು ತಿಳಿದುಕೊಳ್ಳಲಿಲ್ಲ. ಇದರಿಂದ ಸಂಜೆ ಚಂದ್ರಕಲಾ ಮೃತಪಟ್ಟಿದ್ದಾಳೆ. ಇದಕ್ಕೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ಆರೋಪಿಸಿದರು.
ಚಂದ್ರಕಲಾಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಮೃತಳ ಪೋಷಕರು ಆಸ್ಪತ್ರೆಯ ವೈದ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ರೋಗಿಯ ಗಂಭೀರ ಪರಿಸ್ಥಿತಿಯನ್ನರಿಯದೇ ಇಲ್ಲಿ ಕೇವಲ ಸಾಮಾನ್ಯ ರೋಗಿಗೆ ತೋರುವ ಕಾಳಜಿ ವಹಿಸಲಾಯಿತು. ವೈದ್ಯರು ಎದೆನೋವು ಶಮನಕ್ಕೆ ಮುಂದಾಗದೇ ಕೇವಲ ದಾದಿಯರು ಚಿಕಿತ್ಸೆ ನೀಡಿದರು.
ಇದೇ ದುರ್ಘಟನೆಗೆ ಕಾರಣ ಎಂದು ಆರೋಪಿಸಿ ವೈದ್ಯರ ಮೇಲೆ ಹಲ್ಲೆ ಮಾಡಲು ಮುಂದಾದರು. ಕೊನೆಗೆ ಆಸ್ಪತ್ರೆಯ ಹಿರಿಯ ವೈದ್ಯರು ಆಗಮಿಸಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿಲ್ಲ. ನಾವು ಅಗತ್ಯವಿರುವ ಚಿಕಿತ್ಸೆಯನ್ನು ನೀಡಿದೆವು. ಆದರೆ, ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಪ್ರಾಣವನ್ನು ಉಳಿಸಲಾಗಲಿಲ್ಲ. ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ವಾದಿಸಿದರು. ಕೊನೆಗೆ ಗಲಾಟೆ ತಣ್ಣಗಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement