ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್, ಲೇಖನ ಸಾಮಗ್ರಿ ವಿತರಣೆ
ಚಿಂತಾಮಣಿ: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಉಚಿತ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವ ಚಿಂತಾಮಣಿ ಪಟ್ಟಣದ ರಾಯಲ್ ವಿದ್ಯಾ ಸಂಸ್ಥೆ ಅಧ್ಯಕ್ಷ ರಾಮಕೃಷ್ಣ ಅವರ ಸೇವೆಯ ಬಗ್ಗೆ ಮುಖ್ಯ ಶಿಕ್ಷಕ ಮದ್ದಿರೆಡ್ಡಿ ಶ್ಲಾಘನೆ ವ್ಯಕ್ತಪಡಿಸಿದರು.
ತಾಲೂಕಿನ ಗಡಿಭಾಗದ ಚಿಲಕಲನೇರ್ಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಕ್ಕಕೋನಪ್ಪ ಚಾರಿಟಬಲ್ ಟ್ರಸ್ಟ್ ಹಾಗೂ ರಾಯಲ್ ವಿದ್ಯಾಸಂಸ್ಥೆಯ ವತಿಯಿಂದ ಉಚಿತ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಚುಟುಕು ಕವಿ ಮಂಜುನಾಥ್ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸುವುದರಲ್ಲಿ ತಮ್ಮ ಸಮುದಾಯದ ಪಾತ್ರ ಬಹಳ ಪ್ರಮುಖವಾದದ್ದು, ಆದುದರಿಂದ ಪೋಷಕರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ನೀಡಬೇಕೆಂದರು.
ಕಾಲೇಜಿನ ಉಪನ್ಯಾಸಕ ಕೆ.ಪಿ. ನಾಗರಾಜ್ ದೇಶ ರಕ್ಷಣೆಗೆ ವಿದ್ಯಾರ್ಥಿಗಳು ಮುಂದಾಗಬೇಕೆಂದು ಕರೆ ನೀಡಿದರು. ಸಾಲಿನಲ್ಲಿ ನಿಂತಿದ್ದ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವರ್ಗ, ಪೋಷಕರು , ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು