'ಸ್ವಾತಂತ್ರ್ಯ ಹೋರಾಟಗಾರರ ತತ್ವ, ಆದರ್ಶ ಎಲ್ಲರಿಗೂ ಮಾದರಿ'
ಗೌರಿಬಿದನೂರು: ಭಾರತ ಮಾತೆಯ ಹೆಮ್ಮೆಯ ಪುತ್ರರಾದ ಗಾಂಧಿ, ನೆಹರು, ಸುಭಾಷ್ ಅವರಂತಹ ಮಹನೀಯರ ದೇಶ ಸೇವೆಯನ್ನು ಹಾಗೂ ರಾಷ್ಟ್ರ ಪ್ರೇಮ ದೇಶಾಭಿಮಾನ, ತತ್ವ ಆದರ್ಶಗಳು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕಿದೆ ಎಂದು ನಾಡಕಚೇರಿಯ ಉಪ ತಹಸೀಲ್ದಾರ್ ರಘುಪತಿ ತಿಳಿದರು.
ಅವರು ಮಂಚೇನಹಳ್ಳಿಯ ಹೋಬಳಿ ಕೇಂದ್ರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ 67 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಸ್ವಾತಂತ್ರಕ್ಕೆ ಹೋರಾಡಿದ ವೀರರನ್ನು ಸ್ಮರಿಸಬೇಕು, ಹಿಂದಿನವರು ತಂದು ಕೊಟ್ಟ ಸ್ವಾಭಿಮಾನದ ಸ್ವಾತಂತ್ರ್ಯದಿಂದ ದೇಶದ ನಾಡು ನುಡಿ, ಸಂಸ್ಕೃತಿಯ ಅಭಿವೃದ್ಧಿಯೊಂದಿಗೆ ದೇಶದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರು ಶ್ರಮಿಸಿ ಎಂದರು.
ಕಾಲೇಜು ಪ್ರಾಂಶುಪಾಲ ಎಸ್. ನಂಜುಂಡ ಮಾತನಾಡಿ ತ್ಯಾಗ ಬಲಿದಾನ ದೇಶಾಭಿಮಾನ ಎಲ್ಲರಲ್ಲೂ ಮನೆಮಾಡಲಿ ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಬಿಡಿಸಲು ಹಲವಾರು ಸ್ವಾತಂತ್ರ್ಯ ಹೋರಾಟಗಾರರು ದೇಶದಾದ್ಯಂತ ಒಗ್ಗೂಡಿ ಹೋರಾಡಿ ಆಂಗ್ಲರ ಗುಂಡಿಗೆ ಎದೆಯೊಡ್ಡಿ ಸೆರೆವಾಸ ಅನುಭವಿಸಿ ದೇಶವನ್ನು ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡಿದ ವೀರರ ನೆನಪು ಎಲ್ಲರ ಮನದಲ್ಲಿ ಹಸಿರಾಗಿರಲಿ ಎಂದರು.
ಗ್ರಾಪಂ ಅಧ್ಯಕ್ಷರಾದ ಶಬಾನ ರಿಯಾಜ್ ಮಾತನಾಡಿ ಜಾತಿ,ಮತ,ಪಂಥ,ಭೇಧ-ಭಾವವಿಲ್ಲದೆ, ಆಚರಿಸುವ ಎಲ್ಲರ ಹೆಮ್ಮೆಯ ಹಬ್ಬ ಸ್ವಾತಂತ್ರ್ಯೋತ್ಸವವನ್ನು ಎಲ್ಲರೂ ಒಗ್ಗೂಡಿ ಒಂದೇ ತಾಯಿಯ ಮಕ್ಕಳಂತೆ ಆಚರಿಸಬೇಕೆಂದರು.
ಗ್ರಾಪಂ.ಉಪಾಧ್ಯಕ್ಷರಾದ ಭಾಗ್ಯಲಕ್ಷಮ್ಮ ನರಸಿಂಹ, ಹಿರಿಯ ಮುಖಂಡರಾದ ಎಂ.ಜಿ. ರಂಗಪ್ಪ, ಎಂ.ಎನ್. ಗುರುಶಂಕರಯ್ಯ, ಪಿ.ಡಿ.ಓ. ರವೀಂದ್ರ, ಉಪ ಪ್ರಾಂಶುಪಾಲ ಎಸ್.ಎಸ್. ನಾಗರಾಜರಾವ್, ಯುವ ಕಾಂಗ್ರೆಸ್ ಮುಖಂಡ ರಿಯಾಜ್, ಸದಸ್ಯರಾದ ಎಂ.ಪಿ. ಶ್ರೀರಂಗಪ್ಪ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಭಾಸ್ಕರ್, ಗಂಗಪ್ಪ ಉಪಸ್ಥಿತರಿದ್ದರು.