ಕುಡಿವ ನೀರಿಗಾಗಿ ಒತ್ತಾಯಿಸಿ ನಾಗರಿಕರ ಪ್ರತಿಭಟನೆ
ಚಿಂತಾಮಣಿ: ನಗರಸಭಾ ಆಡಳಿತ ಸದಸ್ಯೆ ನೇತೃತ್ವದಲ್ಲಿ ನಾಗರಿಕರು ನೀರು ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ 22ನೇ ವಾರ್ಡ್ನ ನಗರಸಭಾ ಸದಸ್ಯ ಸುಜಾತಮ್ಮ ಶಿವಣ್ಣ, ಶಾಸಕ ಬೆಂಬಲಿತ ಆಡಳಿತ ಸದಸ್ಯರು ನಗರಸಭಾ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ನಿವಾಸಿಗಳ ಜೊತೆ ಸೇರಿ ಪಟ್ಟಣದ ಬಾಗೇಪಲ್ಲಿ ವೃತ್ತದ ಬಳಿ ಇರುವ ನಗರಸಭಾ ನೀರು ಸರಬರಾಜು ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಊರು ಮುಂದೆ ಇರುವ ಕೊಳವೆ ಬಾವಿ ಮೋಟಾರನ್ನು ತೆಗೆದು ನಿವಾಸಿಗಳಿಗೆ ತೊಂದರೆ ಮಾಡಿದ ವಾಟರ್ಮ್ಯಾನ್ಗಳ ವೈಖರಿ ವಿರುದ್ಧ ನಗರಸಭೆ ಸದಸ್ಯೆ ಸುಜಾತಮ್ಮ ಶಿವಣ್ಣ ಹಾಗೂ ನಿವಾಸಿಗಳು ಮುತ್ತಿಗೆ ಹಾಕಿ ನೀರು ಪೂರೈಸುವಲ್ಲಿ ವಿಫಲಗೊಂಡಿದ್ದಾರೆ ಎಂದು ತಿರುಗಿ ಬಿದ್ದರು.
ಆಯುಕ್ತರಿಗೆ ತರಾಟೆ: ಪಟ್ಟಣದ 22 ನೇ ವಾರ್ಡ್ನ ಗಜಾನನ ವೃತ್ತ ಹಿಂಭಾಗದ ಕುರುಬರ ಪೇಟೆಯ ದಲಿತ ಕೇರಿ ನಿವಾಸಿಗಳಿಗೆ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ನಗರಸಭಾ ಆಯುಕ್ತ ಚನ್ನೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಹಲವು ದಿನಗಳಿಂದ ಈ ಭಾಗದ ನಿವಾಸಿಗಳಿಗೆ ಕುಡಿಯುವ ನೀರಿನಲ್ಲಿ ರಾಜಕೀಯ ಪ್ರೇರಿತದಿಂದ ಸುಮಾರು 100 ಕುಟುಂಬಗಳಿಗೂ ಹೆಚ್ಚು ಕೊಳಚೆ ನಿವಾಸಿಗಳು ವಾಸವಾಗಿದ್ದು,ಇಲ್ಲಿ ಕೂಲಿ ಕಾರ್ಮಿಕರೇ ಅಧಿಕ ಇರುವುದರಿಂದ ನಗರಸಭೆ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸಿ ಶ್ರೀಮಂತರ ಮನೆಗಳಿಗೆ ನೀರು ವ್ಯವಸ್ಥೆ ಕಲ್ಪಿಸಿ ನಮಗೆ ಅನ್ಯಾಯ ಮಾಡುತ್ತಿರುವುದಾಗಿ ಆಯುಕ್ತರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರಸಭಾ ಸದಸ್ಯೆ ಸುಜಾತಮ್ಮ ಶಿವಣ್ಣ ಮಾತನಾಡಿ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರು ಸಮಸ್ಯೆ ತಲೆದೂರಲು ಕಾರಣವಾಯಿತು ಎಂದು ಆರೋಪಿಸಿದರು.
ಆಯುಕ್ತರ ಭರವಸೆ: ಆಯುಕ್ತ ಚನ್ನೇಗೌಡ ಪ್ರತಿಭಟನಾಕಾರರರನ್ನು ಸಮಾಧಾನ ಪಡಿಸಿ ನಗರಸಭೆ ಅಧಿಕಾರಿಗಳಾದ ಚಕ್ರಪಾಣಿ ಮತ್ತು ಗೌತಮ್ ಅವರೊಂದಿಗೆ ಚರ್ಚಿಸಿ ಕೂಡಲೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲು ಸೂಚಿಸಿದರು.
ನಿವಾಸಿಗಳಾದ ರಾಜ, ಶಿವ, ಮುನಿರಾಜು, ಶಂಕರಪ್ಪ, ಶಾಂತಮ್ಮ, ತಿಪ್ಪಕ್ಕ, ಅಕ್ಕಯಮ್ಮ, ಮಂಜುಳಮ್ಮ, ಅನಿತ, ವೆಂಕಟಲಕ್ಷ್ಮಮ್ಮ, ಸಲ್ಮಾ, ರತ್ನಮ್ಮ ಸೇರಿದಂತೆ ಮತ್ತಿತರೆ ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.