ತೇರಹಳ್ಳಿ ಬೆಟ್ಟದಲ್ಲಿ ಶೀಘ್ರ ಐಎಎಸ್ ತರಬೇತಿ ಕೇಂದ್ರ
ಜಿಲ್ಲಾ ಕುರುಬರ ಹೋರಾಟ ಸಮಿತಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ವರ್ತೂರ್ ಆರ್. ಪ್ರಕಾಶ್ ಘೋಷಣೆ
ಕ.ಪ್ರ.ವಾರ್ತೆ, ಕೋಲಾರ, ಆ.17
ಕರ್ನಾಟಕ ಲೋಕ ಸೇವಾ ಆಯೋಗ (ಕೆಎಎಸ್)ದ ಪರೀಕ್ಷೆಗಳಲ್ಲಿ ಅನೇಕ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ರೀತಿ ಐಎಎಸ್ ಪರೀಕ್ಷೆಗಳಲ್ಲೂ ಜಿಲ್ಲೆಯ ಯುವಕರು ಸಾಧನೆಗೈಯಬೇಕೆಂಬ ಉದ್ದೇಶದಿಂದ ತಾಲೂಕಿನ ತೇರಹಳ್ಳಿ ಬೆಟ್ಟದಲ್ಲಿ ಐಎಎಸ್ ಪರೀಕ್ಷಾರ್ಥಿಗಳಿಗಾಗಿ ವಿಶೇಷ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಮಾಜಿ ಸಚಿವ, ಹಾಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕುರುಬರ ಹೋರಾಟ ಸಮಿತಿಯಿಂದ 2012-2013ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80 ಅಂಕ ಗಳಿಸಿರುವ ಎಲ್ಲ ಜಾತಿಯ 150ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಲಾರ ಎಂದರೆ ಕೇವಲ ಕೋಲಾರ ಆಡ್ಮಿಮಿನಿಸ್ಟ್ರೇಟಿವ್ ಸರ್ವೀಸ್ (ಕೆಎಎಸ್) ಮಾತ್ರವಲ್ಲ, ಐಎಎಸ್ನಲ್ಲೂ ನಿಪುಣರಿದ್ದಾರೆ ಎಂಬುದನ್ನು ಸಾಬೀತು ಮಾಡುವ ಉದ್ದೇಶದಿಂದ ತೇರಹಳ್ಳಿ ಬೆಟ್ಟದ ಸುಂದರ ತಾಣದಲ್ಲಿ ಐಎಎಸ್ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸುವುದಾಗಿ ಹೇಳಿದರು.
ಕನಿಷ್ಠ 100 ಮಂದಿ ಯುವಕರಿಗೆ ತರಬೇತಿ ಕೇಂದ್ರದ ಸವಲತ್ತು ಉಪಯೋಗಕ್ಕೆ ಪ್ರವೇಶ ನೀಡಲಾಗುವುದು, ವಸತಿ, ಊಟ ಸೇರಿದಂತೆ ಎಲ್ಲ ರೀತಿಯ ಸೌಲವತ್ತುಗಳನ್ನು ಕಲ್ಪಿಸುತ್ತೇನೆ. ತರಬೇತಿಗೆ ಆಯ್ಕೆಯಾಗುವ ಯುವಕರು 5 ವರ್ಷಗಳ ಕಾಲ ತರಬೇತಿ ಕೇಂದ್ರದಲ್ಲೇ ಉಳಿಯಬೇಕಾಗುತ್ತದೆ ಎಂದರು.
ಕಾಲೇಜುಗಳಿಗೆ ಹೋಗಿ ಬರುವುದಕ್ಕೆ ತೇರಹಳ್ಳಿ ಬೆಟ್ಟದಿಂದ ಕೋಲಾರಕ್ಕೆ ಹೈಟೆಕ್ ಬಸ್ಸಿನ ವ್ಯವಸ್ಥೆ ಮಾಡುತ್ತೇನೆ, ಕನಿಷ್ಠ 5 ವರ್ಷ ತರಬೇತಿಗಾಗಿ ಯುವಕರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ. ಐಎಎಸ್ ಮುಗಿದ ನಂತರ ಕೆಲಸಕ್ಕೆ ಸೇರಿ ತಮ್ಮ ತಂದೆ ತಾಯಿ ಹಾಗೂ ಒಡಹುಟ್ಟಿದವರನ್ನು ತಮ್ಮ ಬಳಿ ಇಟ್ಟುಕೊಂಡು ಚೆನ್ನಾಗಿ ಸಾಕಬಹುದು. ಅದೇ ರೀತಿ ತಂದೆ ತಾಯಿಗಳು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಚಿಂತನೆ ಮಾಡಿದಲ್ಲಿ ತಮಗೂ ಮತ್ತು ಕೋಲಾರ ಜಿಲ್ಲೆಗೆ ಸಹಾಯವಾಗುತ್ತದೆ ಎಂದರು.
ಇಷ್ಟು ದಿನ ನಾನು ಸಹಾಯ ಕೇಳಿ ಬಂದವರಿಗೆಲ್ಲ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದೇನೆ, ಮದುವೆ-ಮುಂಜಿ, ಇನ್ನಿತರ ಶುಭಾ ಕಾರ್ಯಗಳಿಗೆ 3000 ದಿಂದ 5000 ನೀಡುವುದಕ್ಕಿಂತ ಶಿಕ್ಷಣಕ್ಕಾಗಿ ಸಹಕಾರ ನೀಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬ ನಂಬಿಕೆಯಿಂದ ಇನ್ನು ಮುಂದೆ ತೇರಹಳ್ಳಿ ಬೆಟ್ಟದಲ್ಲಿ ಕೋಲಾರ ಜಿಲ್ಲೆಯ ಭವಿಷ್ಯ ರೂಪಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಐಎಎಸ್ ಮಾಡುವುದು ಕಷ್ಟದ ಕೆಲಸ. ಒಂದು ವೇಳೆ ಹಗಲು ರಾತ್ರಿ ಕಷ್ಟಪಟ್ಟು ಓದಿ ಐಎಎಸ್ ಮಾಡಿದರೂ ಕೆಲಸ ಸಿಗುವುದು ಸುಲಭವಲ್ಲ. ಕೇಂದ್ರದಲ್ಲಿನ ಯುಪಿಎ ಸರ್ಕಾರ ಐಎಎಸ್ ಪಾಸ್ ಮಾಡಿದವರಿಂದ ಕೆಲಸಕ್ಕಾಗಿ ಹಣ ಕೇಳುತ್ತಿರುವುದು ದೌರ್ಭಾಗ್ಯ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದಕ್ಷ ಅಧಿಕಾರಿಗಳನ್ನು ಕೋಲಾರಕ್ಕೆ ವರ್ಗಾವಣೆ ಮಾಡಲು ಆಗುತ್ತಿಲ್ಲ. ನಾನು ಈ ಹಿಂದೆ ಸಚಿವನಾಗಿದ್ದಾಗ ಸರ್ಕಾರವನ್ನು ಕಾಡಿ ಬೇಡಿ ಕರೆ ತಂದ ಅಧಿಕಾರಿಗಳೇ ಬಹುತೇಕರು ಈಗಲೂ ಇದ್ದಾರೆ, ಕೋಲಾರ ಜಿಲ್ಲೆಯ ವಾತಾವರಣ ಕಲುಷಿತವಾಗಿರುವುದರಿಂದ ಯಾವುದೇ ಒಬ್ಬ ಅಧಿಕಾರಿ ಬರಲು ಇಷ್ಟಪಡುತ್ತಿಲ್ಲ. ಈ ಸರ್ಕಾರಕ್ಕೆ ಧೈರ್ಯವಿದ್ದರೆ ಹೊಸ ಅಧಿಕಾರಿಗಳನ್ನು ಜಿಲ್ಲೆಗೆ ತರಲಿ ಎಂದು ಸವಾಲು ಹಾಕಿದರು.
ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳು ಸ್ಥಾಪನೆ ಆಗುತ್ತಿವೆ. ಇದರಿಂದ ರೈತರ ಭೂಮಿ ಬೆಲೆಯೂ ಏರಿಕೆ ಆಗುತ್ತಿದೆ. ಜಿಲ್ಲೆಯ ಈಗಿನ ಪರಿಸ್ಥಿತಿಯಲ್ಲಿ ಕೃಷಿಯನ್ನೇ ಅವಲಂಬಿಸಿ ಬದುಕಲು ಸಾಧ್ಯವಿಲ್ಲ, ಅಂತರ್ಜಲ ಕುಸಿದಿದೆ. ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಿಕ್ಷಣವನ್ನು ಕಲ್ಪಿಸಿ ಉತ್ತಮ ಜೀವನಕ್ಕೆ ಭದ್ರ ಬುನಾದಿ ಹಾಕಬೇಕೆಂದರು.
ವಿದ್ಯಾರ್ಥಿಗಳು ಕೇವಲ ಬಿಇ, ಎಂಬಿಬಿಎಸ್ಗೆ ಮಾತ್ರ ಆದ್ಯತೆ ನೀಡದೆ ಬೇಗನೆ ಕೆಲಸ ಸಿಗುವ ಕೋರ್ಸ್ಗಳ ಕಡೆ ಗಮನ ನೀಡಬೇಕು. ಐಟಿಐಗಳಿಗೆ ಮತ್ತು ಗಾರ್ಮೆಂಟ್ಸ್ಗಳಿಗೆ ಹೆಚ್ಚಿನ ಬೇಡಿಕೆ ಈರುವುದರಿಂದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರ ಈ ಎರಡೂ ಕೋರ್ಸ್ಗಳಲ್ಲಿ ತರಬೇತಿ ಪಡೆಯುವುದರಿಂದ ಉತ್ತಮ ಸಂಪಾದನೆ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು 3 ತಿಂಗಳಲ್ಲಿ ಮತ್ತೊಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು. ಜಿಲ್ಲಾ ಕುರುಬರ ಹೋರಾಟ ಸಮಿತಿಗೆ ಬದಲು ಬೇರೊಂದು ಹೆಸರಿನಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಿದರೆ ಎಲ್ಲ ವರ್ಗದ ಜನತೆ ಸಹಕಾರ ಪಡೆಯಲು ಅನುಕೂಲ ಎಂದರು.
ಹಿರಿಯ ಪತ್ರಕರ್ತ ಕೆ.ಪ್ರಹ್ಲಾದರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್, ಸಾಹಿತಿ, ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿದರು.
ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಗ್ರಾಪಂ ಅಧ್ಯಕ್ಷ ಬೈರಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ರಘುರಾಂ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ರಾಜ್ಯ ಪರಿಷತ್ ಸದಸ್ಯ ನಾಗರಾಜು, ಕಾಂಗ್ರೆಸ್ ಮುಖಂಡರಾದ ಜೆ.ಕೆ.ಜಯರಾಂ, ನಗರಸಭೆ ಸದಸ್ಯರಾದ ಸೋಮಶೇಖರ್, ಮಂಜುನಾಥ್ ಇದ್ದರು.
ಜಿಲ್ಲಾ ಕುರುಬರ ಹೋರಾಟ ಸಮಿತಿ ಅಧ್ಯಕ್ಷ ತ್ಯಾಗರಾಜ್ ಮುದ್ದಪ್ಪ ಸ್ವಾಗತಿಸಿ, ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ರಾಜಪ್ಪ ನಿರೂಪಿಸಿದರು