ವಕೀಲರಿಗೂ ಸರ್ಕಾರಿ ಭೂಮಿ ನೀಡಲು ಮನವಿ
ಗುಡಿಬಂಡೆ: ತಾಲೂಕಿನ ಹಲವೆಡೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ತಾಲೂಕು ಆಡಳಿತ ಒತ್ತುವರಿ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ತೆರವುಗೊಳಿಸಿ, ಸರ್ಕಾರದಿಂದ ವಕೀಲರಿಗೆ ಉಚಿತ ಭೂಮಿ ಮಂಜೂರು ಮಾಡಬೇಕು ಎಂದು ಪಟ್ಟಣದ ವಕೀಲ ಹಾಗೂ ಮಾಜಿ ಪಪಂ ಸದಸ್ಯ ಜಿ.ಎಂ.ಅನಿಲಕುಮಾರ್ ತಹಸೀಲ್ದಾರ್ ಅವರಿಗೆ ಲಿಖೀತ ಮನವಿ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ ಭೂರಹಿತ ಕೃಷಿ ಕಾರ್ಮಿಕರು ಹಿಂದುಳಿದ ಜನಾಂಗಗಳಿಗೆ ಸರ್ಕಾರದಿಂದ ಉಚಿತ ಜಮೀನು ನೀಡಲು ಅವಕಾಶವಿದೆ. ಆದರೆ, ತಾಲೂಕಿನ ಬಹಳಷ್ಟು ಸರ್ಕಾರಿ ಜಾಗವನ್ನ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿ ಬೆಳೆ ತೆಗೆಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಒತ್ತುವರಿ ತೆರವಿಗೆ ಮುಂದಾಗುತ್ತಿಲ್ಲ ಎಂದಿದ್ದಾರೆ. ಗೋಮಾಳ, ಕೆರೆ ಅಂಗಳ, ಅರಣ್ಯ ಪ್ರದೇಶ ಹೀಗೆ ಎಲ್ಲೆಡೆ ಭೂ ಕಬಳಿಕೆ ನಡೆದಿದೆ ಎಂಬ ಸಂಗತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಆದರೂ, ಅಧಿಕಾರಿಗಳು ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಡಳಿತ ಯಂತ್ರ ಚುರುಕುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ವೀರಶೈವ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಮಾಲೂರು: ಮಾಲೂರು ತಾಲೂಕು ವೀರಶೈವ ಲಿಂಗಾಯತ ಸಮಾಜ ಸಂಘದ ವತಿಯಿಂದ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.75 ಮೇಲ್ಪಟ್ಟು ಅಂಕಗಳಿಸಿರುವ ವೀರಶೈವ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿನ ಬೆಳ್ಳನಪುರಿ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದಲ್ಲಿ ಆ.25 ರಂದು ನಡೆಯಲಿರುವ ಬಸವಜಯಂತಿ, ರೇಣುಕಾಚಾರ್ಯ ಜಯಂತಿ, ಶಿವದೀಕ್ಷಾ ಕಾರ್ಯಕ್ರಮದಲ್ಲಿ ವೀರಶೈವ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಹಕಾರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿಗಳಿಗಾಗಿ ಬಿ.ವಿ.ಸೋಮಶೇಖರ್ (9449496617), ಸಿ.ಶಶಿಧರ್ (94494444324) ಮಂಜುನಾಥ್ (9448322039), ಗಣೇಶ್ ಸ್ಟುಡಿಯೋ ಮಂಜುನಾಥ್ (9449113955) ಅವರನ್ನು ಸಂಪರ್ಕಿಸಲು ಸಂಘಟನಾ ಕಾರ್ಯದರ್ಶಿ ಶಶಿಧರ್ ತಿಳಿಸಿದ್ದಾರೆ.
ಮುನಿಯಪ್ಪಗೆ ಬೀಳ್ಕೊಡುಗೆ
ಟೇಕಲ್: ಇಲ್ಲಿಗೆ ಸಮೀಪದ ದೊಡ್ಡಮಲ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಎ.ವಿ.ಮುನಿಯಪ್ಪ ನಿವೃತ್ತಿ ಹೊಂದಿದ ಹಿನ್ನೆಲೆ ಸ್ವಾತಂತ್ರ್ಯೋತ್ಸವದಂದು ಅವರನ್ನು ಸ್ಥಳೀಯ ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಪ್ಪ, ರವಿಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಬಿ.ಮಂಜುನಾಥ್ ಹಾಗೂ ಸಮಿತಿ ಪದಾಧಿಕಾರಿಗಳು ಅವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುನಿಯಪ್ಪ, ಸೇವಾ ಅವಧಿಯಲ್ಲಿ ಕೈಲಾದಷ್ಟು ಪಾಠ ಪ್ರವಚನ ಮಾಡಿದ್ದೇನೆ. ಶಾಲೆ ಮಾದರಿಯಾಗಿಸಲು ಪ್ರಯತ್ನಿಸಿದ್ದೇನೆ ಎಂದರು. ಪೋಷಕರಾದ ರವೀಂದ್ರ, ಗಿರಿಗೌಡ, ಪ್ರಭಾರಿ ಮುಖ್ಯ ಶಿಕ್ಷಕ ಕೆ.ಎನ್. ಮಂಜುನಾಥ್, ಶಿಕ್ಷಕ ವೃಂದದ ಆರ್.ರಮೇಶ್, ಎಸ್.ಬಿ. ಸುನಂದಮ್ಮ, ಎನ್.ವಿ. ಸುರೇಖಾ, ವಿ.ಲಲಿತಾ, ನಿವೃತ್ತ ಮುಖ್ಯ ಶಿಕ್ಷಕ ಹಿರಣ್ಯಗೌಡ ಉಪಸ್ಥಿತರಿದ್ದರು.