ವೈದ್ಯಾಧಿಕಾರಿಗಳ ನಿರ್ಲಕ್ಷ್ಯ: ಸುಬ್ಬಾರೆಡ್ಡಿ ತೀವ್ರ ಆಕ್ರೋಶ
ಕ.ಪ್ರ.ವಾರ್ತೆ ಬಾಗೇಪಲ್ಲಿ ಆ. 17
ಕಳೆದ 5 ವರ್ಷಗಳಿಂದ ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯದೆ ಇಲ್ಲಿನ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
50 ರಿಂದ 100 ಹಾಸಿಗೆ ಮೆಲ್ದರ್ಜೆಗೇರಿಕೆಯಾಗಿರುವ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸಭೆ ಕರೆದು ಆಸ್ಪತ್ರೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಆಸ್ಪತ್ರೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಕಳೆದ 5 ವರ್ಷಗಳಿಂದ ಕರೆಯದೇ ಇರುವುದು ದುರಂತ ಎಂದ ಅವರು, ಇದರಿಂದ ಈ ಆಸ್ಪತ್ರೆಯ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
ನಾನು ಅಧಿಕಾರಕ್ಕೆ ಬಂದ ಮೇಲೆ ಜನಪರ ಕಾಳಜಿಯುಳ್ಳ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಇನ್ನು ಮುಂದೆ ಆಸ್ಪತ್ರೆ ಕಾರ್ಯವೈಖರಿ ಚೆನ್ನಾಗಿ ನಡೆದು ರೋಗಿಗಳಿಗೆ ಸೇವೆ ಮಾಡಲಾಗುತ್ತದೆ. ಹೆರಿಗೆಗೆ ಬರುವ ಹೆಣ್ಣು ಮಕ್ಕಳಿಗೆ ಬಿಸಿ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆ ನೀರಿನ ವ್ಯವಸ್ಥೆಯಿಲ್ಲದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಇತ್ತೀಚೆಗೆ ನೂತನವಾಗಿ ಕೊಳವೆ ಕೊರೆಸಲಾಗಿದ್ದು ಈ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದೆ ತಕ್ಷಣ ಪಂಪ್ ಮೋಟರ್ ಯಂತ್ರ ಅಳವಡಿಸಿ ರೋಗಿಗಳಿಗೆ ಸರಬರಾಜು ಮಾಡಲಾಗುವುದು ಎಂದರಲ್ಲದೆ ಈ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ತುಂಬಿಸಲಾಗುವುದು ಹಾಗೂ ಸೆಕ್ಯುರಿಟಿ ಗಾರ್ಡ್ ಮತ್ತು ಪೊಲೀಸರನ್ನು ರಕ್ಷಣೆಗಿರಿಸಿ ಆಸ್ಪತ್ರೆಯಲ್ಲಿ ವೈದ್ಯರು ಧೈರ್ಯದಿಂದ ಕರ್ತವ್ಯ ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಆಸ್ಪತ್ರೆಯ ಆವರಣದಲ್ಲಿ ಅಡ್ಡಾದಿಡ್ಡಿ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹಗಳನ್ನು ನಿಲ್ಲಿಸುತ್ತಿರುವುದರಿಂದ ಆಸ್ಪತ್ರೆಗೆ ಬಂದು ಹೋಗುವ ರೋಗಿಗಳಿಗೆ ತೊಂದರೆಯಾಗಿದೆ. ಇದನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಸದಸ್ಯ ಎ.ಜಿ. ಸುಧಾಕರ್ ಮಾತನಾಡಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಕರೆದು ಚರ್ಚಿಸಿ ರೋಗಿಗಳಿಗೆ ತೊಂದರೆಯಾಗದಂತೆ ಸೂಕ್ತ ಸಲಹೆ ನೀಡಲಾಗಿದೆ. ಮುಂದಿನ ಒಂದು ವಾರದೊಳಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಮತ್ತು ಮಂತ್ರಿಗಳನ್ನು ಭೇಟಿ ಮಾಡಿ ಅದಷ್ಟು ಬೇಗನೆ ವೈದ್ಯರ ಹಾಗೂ ಯಂತ್ರೋಪಕರಣ ಕೊರತೆ ನೀಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯ ನರಸಿಂಹಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ನರೇಂದ್ರ, ಪುರಸಭೆ ಸದಸ್ಯ ಮದುಸೂದನರೆಡ್ಡಿ, ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಶ್ರೀನಿವಾಸ, ತಹಸೀಲ್ದಾರ್ ಎಂ.ಎ. ಪದ್ಮ, ಪುರಸಭೆ ಮುಖ್ಯಾಧಿಕಾರಿ ಆರ್. ಶ್ರೀಕಾಂತ್, ಆಡಳಿತ ವೈದ್ಯಾಧಿಕಾರಿ ಡಾ.ಮಂಜೇನಾಯಕ್, ವೈದ್ಯ ರವಿಕುಮಾರ್ ಹಾಜರಿದ್ದರು.