ಹಸು ಕರುವಿಗೆ ಹಾಲುಣಿಸುವ ನಾಯಿ!
ತುರುವೇಕೆರೆ: ಏನ್ ಪ್ರೀತಿ, ವಾತ್ಸಲ್ಯ ನೋಡಿ. ನಿಯತ್ತಿಗೆ ಹೆಸರಾದ ನಾಯಿಯೊಂದು ತಬ್ಬಲಿಯಾಗಿದ್ದ ಸೀಮೆ ಹಸುವಿನ ಕರುವಿಗೆ ಪ್ರತಿದಿನ ಹಾಲುಣಿಸುವ ಅಪರೂಪದ ಸಂಗತಿ ಸಮೀಪದ ಆಲ್ಬೂರಿನಲ್ಲಿ ನಡೆಯುತ್ತಿದೆ.
ಕಳೆದ ಏಪ್ರಿಲ್ನಲ್ಲಿ ಗ್ರಾಮದ ಜಮೀನ್ದಾರರಾದ ಬೋರೇಗೌಡರ ಮನೆಯಲ್ಲಿದ್ದ ಸೀಮೆಹಸು ಕರುವೊಂದಕ್ಕೆ ಜನ್ಮ ನೀಡಿತ್ತು. ಸುಮಾರು 20 ದಿನಗಳ ನಂತರ ಆರೋಗ್ಯದಲ್ಲಿ ತೊಂದರೆಯುಂಟಾಗಿ ತಾಯಿ ಹಸು ಮೃತ ಹೊಂದಿತ್ತು. ಅದೇ ವೇಳೆಗೆ ಬೋರೇಗೌಡರ ಮನೆಯಲ್ಲಿದ್ದ ಸಾಕು ನಾಯಿ ಸಹ 3 ಮರಿಗಳಿಗೆ ಜನ್ಮವಿತ್ತಿತ್ತು. ಆದರೆ ಮರಿಗಳು ಬಹಳ ಮುದ್ದಾಗಿದ್ದರಿಂದ ಮರಿಗಳು ಕಣ್ಣು ಬಿಟ್ಟ ಕೆಲ ದಿನಗಳಲ್ಲೇ ಮರಿಗಳನ್ನು ಕೆಲವರು ಸಾಕಲು ತೆಗೆದುಕೊಂಡು ಹೋದರು. ಇತ್ತ ಸೀಮೆ ಹಸುವಿನ ಕರು, ತಾಯಿಯಿಲ್ಲದೆ ಅನಾಥವಾದರೆ, ನಾಯಿ ತನ್ನ ಮರಿಗಳು ಜೀವಂತವಿದ್ದರೂ ಮರಿಗಳನ್ನು ಕಳೆದುಕೊಂಡು ಸಂಕಟಪಡುತ್ತಿತ್ತು. ತದನಂತರದ ದಿನಗಳಲ್ಲಿ ನಾಯಿ ಮತ್ತು ಕರು ಒಟ್ಟಿಗೆ ಇರುವುದನ್ನು ಮಾತ್ರ ಮನೆ ಮಾಲೀಕ ಬೋರೇಗೌಡ ಗಮನಿಸಿದ್ದರು. ಕೆಲ ದಿನಗಳ ನಂತರ ಅಚಾನಕ್ಕಾಗಿ ನೋಡಿದಾಗ ಕರು, ನಾಯಿಯ ಕೆಚ್ಚಲಿನಿಂದ ಹಾಲು ಕುಡಿಯುವುದನ್ನು ದೂರದಿಂದಲೇ ಗಮನಿಸಿದ್ದರು. ಇದು ಕೇವಲ ಒಂದು ದಿನದ ಬದುಕಿರಬಹುದೇನೋ ಎಂದುಕೊಂಡಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಮನೆಯಿಂದ ಕರುವನ್ನು ಹೊರಗೆ ತಂದು ಕಟ್ಟುವ ವೇಳೆ ಗೆ ಸರಿಯಾಗಿ ನಾಯಿ ಕರುವಿನ ಬಳಿ ಬಂದು ಹಾಲುಣಿಸುವುದನ್ನು ಪ್ರತಿದಿನ ನೋಡತೊಡಗಿದರು.