21ರಿಂದ ರಾಘವೇಂದ್ರಸ್ವಾಮಿ ಆರಾಧನ ಮಹೋತ್ಸವ
ಕ.ಪ್ರ.ವಾರ್ತೆ , ಕೋಲಾರ , ಆ. 18
ನಗರದ ಬ್ರಾಹ್ಮಣರ ಬೀದಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ. 21ರಿಂದ 23 ರವರೆಗೆ ಮೂರು ದಿನಗಳ ಕಾಲ ಮಂತ್ರಾಲಯ ಪ್ರಭುಗಳ 342ನೇ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ರಾಘವೇಂದ್ರ ಸ್ವಾಮಿಗಳ ಮಠಡ ಟ್ರಸ್ಟ್ ಕಾರ್ಯದರ್ಶಿ ಎನ್.ಕೆ. ಅಚ್ಚುತ ತಿಳಿಸಿದ್ದಾರೆ.
ಆರಾಧನಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಆ. 21ರ ಬುಧವಾರ ಆರಂಭವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಗಣಪತಿ ಪ್ರಾರ್ಥನೆ, 10ಕ್ಕೆ ಗುರುರಾಯರ ಪಾದಪೂಜೆ, 11ಕ್ಕೆ ಕನಕಾಭಿಷೇಕ, ರಾಘವೇಂದ್ರ ತೀರ್ಥರ ಕುರಿತು ಉಪನ್ಯಾಸ, ಸಂಜೆ 7 ರಿಂದ 9ರವರೆಗೂ ಬೆಂಗಳೂರಿನ ಕಮಲಾ ಪ್ರಾಣೇಶ್ ಸಂಗಡಿಗರಿಂದ ದೇವರನಾಮಗಳ ಗಾಯನ ನಡೆಯಲಿದೆ.
ಆ. 22ರ ಗುರುವಾರ ರಾಯರ ಆರಾಧನೆ ಅಂಗವಾಗಿ ಬೆಳಗ್ಗೆ 7 ಗಂಟೆಗೆ ರಾಘವೇಂದ್ರ ಸ್ವಾಮಿಗಳು ಬೃಂದಾವನಕ್ಕೆ ಪರಿಮಳಾಚಾರ್ಯರ ಸೇವಾ ಸಂಘದಿಂದ ಪಂಚಾಮೃತ ಅಭಿಷೇಕ, 9 ಗಂಟೆಗೆ ಗುರು ಭಜನೆಯೊಂದಿಗೆ ಸೀತಾರಾಮರ, ಮುಖ್ಯ ಪ್ರಾಣದೇವರ, ಪ್ರಹ್ಲಾದರಾಜರ ರಥೋತ್ಸವ ಕಾರ್ಯಕ್ರಮ ನಡೆಯಲಿದ್ದು, ಬೃಂದಾವನಕ್ಕೆ ಪುಷ್ಪಾಲಂಕಾರವಿದೆ.
ಇದೇ ದಿನ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಬಿ.ಎಲ್.ರಾಘವೇಂದ್ರರಾವ್ರಿಂದ ವೇದ ಹಾಗೂ ಸ್ತ್ರೋತ್ರಗಳ ಪಠಣ, ಸಂಜೆ 7 ಗಂಟೆಗೆ ಬೆಂಗಳೂರಿನ ಸುಜಾತ ಸಂಗಡಿಗರಿಂದ ಸಂಗೀತ ಕಾರ್ಯಕ್ರಮವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ. 23ರ ಶುಕ್ರವಾರ ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ 11 ಗಂಟೆಗೆ ಸಾಮೂಹಿಕ ಕನಕಾಭಿಷೇಕ, ವೇದವ್ಯಾಸ ವೇದ ಸಂಸ್ಕೃತ ಪಾಠಶಾಲೆ, ಬ್ರಾಹ್ಮಣ ಸಂಘದಿಂದ ವೇದ ಪಠಣ, ಹಯವದನ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುರುರಾಯರ ಆರಾಧನೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದಿದ್ದಾರೆ.