ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಕ್ರಮ ಮರಳು ಸಾಗಣೆ ತಡೆಯಿರಿ

Vishwanath S
Updated On : 19 Aug 2013, 12:25 pm

ಕ.ಪ್ರ.ವಾರ್ತೆ ,  ಕೋಲಾರ ,  ಆ.18
ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮರಳು ಸಾಗಾಣೆ ನಿಷೇಧಿಸಿದ್ದರೂ ಬಹುತೇಕ ಕೆರೆಗಳಿಂದ ಅಕ್ರಮವಾಗಿ ಮರಳನ್ನು ಸಾಗಾಣೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಕ್ರಮ ತಡೆಗಟ್ಟಲು ವಿಫಲರಾಗಿದ್ದಾರೆಂದು ರೈತ ಸಂಘದ ಮುಖಂಡರು ರಾಜ್ಯ ಹೈಕೋರ್ಟಿನಲ್ಲಿ ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್ ಸೇರಿದಂತೆ 11 ಮಂದಿ ಅಧಿಕಾರಿಗಳ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ರೈತ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ಕೆ. ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಮುನೇಗೌಡ ಹಾಗೂ ಜಿಲ್ಲಾಧ್ಯಕ್ಷ ಕೆ.ನಾರಾಯಣಗೌಡ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸರ್ಕಾರಕ್ಕೆ ಸೇರಿದ ಕೆರೆಗಳಲ್ಲಿ ಅಕ್ರಮವಾಗಿ ಮರಳು ಶೋಧನೆ ಮಾಡಿ ಸಾಗಾಣೆ ಮಾಡುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಅಕ್ರಮ ಮರಳು ಸಾಗಾಣೆ ತಡೆಗೆ ಸೂಚಿಸುವಂತೆ ಆ. 30 ರಂದು ನ್ಯಾಯಾಲಯಕ್ಕೆ ಬೆಂಗಳೂರಿನ ಖ್ಯಾತ ವಕೀಲ ಸಿ.ನಾಗೇಶ್ ಮತ್ತು ಬಿ. ನಾರಾಯಣಸ್ವಾಮಿ ಮೂಲಕ ಅರ್ಜಿ ನೀಡಿದ್ದಾರೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಅತಿ ಹೆಚ್ಚು ಅಕ್ರಮ ಮರಳು ಸಾಗಾಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಸಹ ಪ್ರತಿವಾದಿ ಮಾಡಲಾಗಿದೆ.
ಅಕ್ರಮ ಮರಳು ಸಾಗಾಣೆಗೆ ಸಂಬಂಧಿಸಿದಂತೆ 2013ರ ಮೇ 23ರಿಂದ ಅನೇಕ ಅರ್ಜಿಗಳನ್ನು ಜಿಲ್ಲಾ ಆಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಆಡಳಿತಕ್ಕೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ, ಕೆರೆಗಳಲ್ಲಿ ಮರಳು ತೆಗೆಯುವುದರಿಂದ ಅಂತರ್ಜಲಕ್ಕೆ ಅಪಾಯ ಎದುರಾಗುತ್ತಿದೆ. ಅಧಿಕಾರಿಗಳು ಸರ್ಕಾರದ ಆದೇಶವಿದ್ದರೂ ಅಕ್ರಮ ತಡೆಗಟ್ಟಲು ವಿಫಲವಾಗಿದ್ದಾರೆಂದು ಅರ್ಜಿದಾರರ ಪರವಾಗಿ ವಕೀಲರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ, ಕೋಲಾರ ಜಿಲ್ಲಾಧಿಕಾರಿ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಉಪವಿಭಾಗಾಧಿಕಾರಿ, ಮುಳಬಾಗಲು ಶಾಸಕ, ಜಿಲ್ಲೆಯ ಎಲ್ಲ ಐದು ತಾಲೂಕುಗಳ ತಹಸೀಲ್ದಾರ್‌ಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಳಬಾಗಲು ಪೊಲೀಸ್ ಅಧಿಕಾರಿಗಳನ್ನು ಪ್ರತಿಪಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಲಾಗಿದೆ.
ಕೆರೆಗಳ ಉಳಿವಿಗಾಗಿ ಮತ್ತು ಅಂತರ್ಜಲ ಸಮಸ್ಯೆ ನಿವಾರಣೆಗಾಗಿ ಅಕ್ರಮ ಮರಳು ಸಾಗಾಣೆ ಅತ್ಯವಶ್ಯಕವಾಗಿರುವುದರಿಂದ ಸದರಿ ಪ್ರತಿವಾದಿಗಳಿಗೆ ಅಕ್ರಮ ತಡೆಗಟ್ಟಲು ಸೂಚನೆ ನೀಡಬೇಕು, ಸರ್ಕಾರವೇ ಅಕ್ರಮ ಮರಳು ಸಾಗಾಣೆ ನಿಷೇಧಿಸಿದ್ದರೂ ಕಾನೂನು ಉಲ್ಲಂಘನೆ ಮಾಡಿರುವವರಿಗೆ ಸ್ಪಷ್ಟ ಎಚ್ಚರಿಕೆ ನೀಡುವ ಮೂಲಕ ಕೆರೆಗಳ ಹಾಗೂ ಜನತೆಯ ಹಿತ ಕಾಪಾಡಬೇಕೆಂದು ಅರ್ಜಿದಾರರ ಪರವಾಗಿ ವಕೀಲರಾದ ಸಿ.ನಾಗೇಶ್ ಮತ್ತು ಬಿ.ನಾರಾಯಣಸ್ವಾಮಿ ಹೈಕೋರ್ಟ್‌ಅನ್ನು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement