ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉಪನ್ಯಾಸಕರ ಹುದ್ದೆ ಭರ್ತಿಯಿಂದ ಶೈಕ್ಷಣಿಕ ಪ್ರಗತಿ

Vishwanath S
Updated On : 19 Aug 2013, 12:25 pm

ಕ.ಪ್ರ.ವಾರ್ತೆ ,  ಕೋಲಾರ ,  ಆ.18
ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿ ಗಮನದಲ್ಲಿಟ್ಟುಕೊಂಡು ಉಪನ್ಯಾಸಕರ ಹುದ್ದೆ ಭರ್ತಿ ಮಾಡಬೇಕೆಂದು ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಮೋಹನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಡಿವೈಎಫ್‌ಐ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅತಿಥಿ ಉಪನ್ಯಾಸಕರ ನೇಮಕಾತಿಯ ತೇಪೆ ದಾರಿಯಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ ಎಂದರು.
ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವುದನ್ನು ಬಿಟ್ಟು ಸರ್ಕಾರಗಳು ಅಡ್ಡದಾರಿ ಹುಡುಕುತ್ತಿದೆ. ಪ್ರತಿವರ್ಷ ಕಾಲೇಜುಗಳು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಉಪನ್ಯಾಸಕರ ಹುದ್ದೆಯನ್ನು ಖಾಲಿ ಬಿಟ್ಟುಕೊಂಡು ಬೇಡಿಕೆ ಬಂದಾಗ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜಾಗತೀಕರಣದ ಮಧ್ಯೆ ಸಾರ್ವಜನಿಕ ವಲಯಗಳನ್ನು ದುರ್ಬಲಗೊಳಿಸಿ ಕ್ರಮೇಣ ಖಾಸಗೀಕರಣಗೊಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಖಾಸಗಿ ಕಾಲೇಜುಗಳಿಂದ ಸರ್ಕಾರಿ ಕಾಲೇಜಿನ ಸ್ಥಿತಿ ಕೆಟ್ಟಿಲ್ಲ. ಆದರೂ ಖಾಸಗಿ ಕಾಲೇಜುಗಳು ಮಾತ್ರ ವಿದ್ಯಾಭ್ಯಾಸಕ್ಕೆ ಯೋಗ್ಯ, ಸರ್ಕಾರಿ ಕಾಲೇಜು ಅಯೋಗ್ಯ ಎಂಬ ಭಾವನೆ ಮೂಡಿದೆ. ಸಮುದಾಯ ಇದೇ ಸತ್ಯ ಎಂದು ನಂಬಿದೆ ಎಂದು ಖೇದ ವ್ಯಕ್ತಪಡಿಸಿದರು.
ಕಾಲೇಜುಗಳಿಗೆ ಯುಜಿಸಿ ಶ್ರೇಣಿಯ ವೇತನ ಅನ್ವಯಿಸಿದಾಗಿನಿಂದ ಐಎಎಸ್ ಅಧಿಕಾರಿಗಳಿಗಿಂತ ಹೆಚ್ಚಿನ ಸಂಬಳ ಸಿಗುತ್ತಿದೆ ಎಂಬ ಕಾರಣಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ. ಐಎಎಸ್ ಅಧಿಕಾರಿಗೆ ಇಲ್ಲದ ಸಂಬಳ ಉಪನ್ಯಾಸಕರಿಗೆ ಯಾಕೆ ನೀಡಬೇಕು ಎಂಬ ವಾದ ಮಂಡನೆಯಾಗುತ್ತಿದೆ. ಉಪನ್ಯಾಸಕರ ಹುದ್ದೆ ಭರ್ತಿ ಮಾಡಿದರೆ ಆರ್ಥಿಕ ಹೊರೆಯಾಗುತ್ತದೆ ಎಂಬ ಗುಮ್ಮು ಬಿಟ್ಟು ಹುದ್ದೆ ಭರ್ತಿ ಮಾಡುತ್ತಿಲ್ಲ ಎಂದರು.
ಉಪನ್ಯಾಸಕರ ಹದ್ದೆ ಭರ್ತಿ ಮಾಡದೆ ಪ್ರತಿವರ್ಷ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುತಿದ್ದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯವಿಲ್ಲ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಕೇವಲ ವೇತನ ಹೆಚ್ಚಳಕ್ಕೆ ಹೋರಾಟ ಆಗಬಾರದು. ಉಪನ್ಯಾಸಕರು ನೈತಿಕತೆ, ತಮ್ಮ ಘನತೆ ಸಾಬೀತುಪಡಿಸಿ ನಂತರ ಹೋರಾಟದ ಹಾದಿ ಹಿಡಿಯಿರಿ ಎಂದು ಸಲಹೆ ನೀಡಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ರಾಜಶೇಖರಮೂರ್ತಿ, ಜಿಲ್ಲಾಧ್ಯಕ್ಷ ಬಿ.ವಿ. ಸಂಪಂಗಿ, ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ, ಉಪನ್ಯಾಸಕರಾದ ರವಿಕುಮಾರ್, ನಾಗನಾಳ ಮುನಿಯಪ್ಪ, ಕನ್ನಡ ಉಪನ್ಯಾಸಕಿ ಅಮರಾವತಿ, ರಮಾನಂದ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅಂಬರೀಶ್, ಚೌಡೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement