ಮುನಿಯಪ್ಪ ಸೋಲಿಸಲು ವೀರಯ್ಯ ತಾಲೀಮು
ಕ.ಪ್ರ.ವಾರ್ತೆ , ಕೋಲಾರ , ಆ. 18
ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧಿಸಿ ದಾಖಲೆಯ ಜಯ ಸಾಧಿಸಲು ಹಾಗೂ ಈ ಮೂಲಕ ಮತ್ತಷ್ಟು ಉನ್ನತ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ಹಾಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಬ್ರೇಕ್ ಹಾಕಲು ಬಿಜೆಪಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ತಾಲೀಮು ನಡೆಸಿದ್ದಾರೆ.
2004 ಮತ್ತು 2009ರಲ್ಲಿ ನಡೆದ ಚುನಾವಣೆಯಲ್ಲಿ ಕೆ. ಎಚ್. ಮುನಿಯಪ್ಪ ವಿರುದ್ಧ ಸ್ಪರ್ಧಿಸಿ ಸೋತಿರುವ ಬಿಜೆಪಿಯ ಡಿ.ಎಸ್. ವೀರಯ್ಯ ಪಕ್ಷದಿಂದ ಗ್ರೀನ್ ಸಿಗ್ನಲ್ ಸಿಗುವ ಮುನ್ನವೇ ಚುನಾವಣೆಗಾಗಿ ತಯಾರಿ ನಡೆಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಪ್ರಭಾವ, ಕೆಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸೇರ್ಪಡೆಯ ನಿರೀಕ್ಷೆ ಹಾಗೂ ಜೆಡಿಎಸ್ ಜತೆ ಬಿಜೆಪಿ ಚುನಾವಣಾ ಮೈತ್ರಿ ಮಾಡಿಕೊಳ್ಳಬಹುದೆಂದು ವಿಶ್ವಾಸ ಹೊಂದಿರುವ ವೀರಯ್ಯ ಕಳೆದ ಮೂರು ತಿಂಗಳಿಂದ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಆರಂಭಿಸಿ ಕಾರ್ಯಕರ್ತರ ಜೋಡಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇತ್ತ ಕಳೆದ ಆರು ಚುನಾವಣೆಗಳಲ್ಲಿ ಎದುರಾಳಿಗಳು ಎಸೆದ ಎಲ್ಲ ರೀತಿಯ ಬಾಣಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಗಟ್ಟಿಸಿಕೊಂಡಿರುವ ಕೆ.ಎಚ್. ಮುನಿಯಪ್ಪ, ಮುಂದಿನ ಚುನಾವಣೆಯಲ್ಲೂ ತಮಗೆ ಪ್ರತಿಸ್ಪರ್ಧಿಯಾಗುವ ಅಭ್ಯರ್ಥಿಗಳನ್ನು ಹೇಗೆ ಮಣಿಸಬೇಕೆಂದು ಈಗಾಗಲೇ ಲೆಕ್ಕಾಚಾರ ಆರಂಭಿಸಿದ್ದಾರೆ.
1991 ರಿಂದ 1999ರ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಯಕರ ಸಹಾಯ, ಸಹಕಾರದಿಂದ ಗೆದ್ದು ಪ್ರಭಾವಿ ಮುಖಂಡರಾಗಿ ರೂಪುಗೊಂಡ ಕೆ.ಎಚ್. ಮುನಿಯಪ್ಪ 2004 ಮತ್ತು 2009ರ ಚುನಾವಣೆಯಲ್ಲಿ ಯಾರಿಗೂ ಗುಟ್ಟು ಬಿಟ್ಟು ಕೊಡದೆ ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯ ಮೂಲಕ ಆರು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದು, 7ನೇ ಬಾರಿಯೂ ಸಂಸತ್ ಪ್ರವೇಶ ಮಾಡಲು ಗುಪ್ತಗಾಮಿಯಾಗಿ ಕೆಲಸ ಮಾಡುತ್ತಿದ್ದಾರೆ.
1991ರಿಂದ1999ರವರೆಗೆ ಕೆ.ಎಚ್. ಮುನಿಯಪ್ಪ ಅವರಿಗೆ ಹೇಳಿಕೊಳ್ಳುವಂತಹ ಪ್ರತಿಸ್ಪರ್ಧಿಗಳು ಇರಲಿಲ್ಲ. ಹಾಗಾಗಿ ಗೆಲವಿನ ಮೆಟ್ಟಲು ಸುಲಭವಾಗಿತ್ತು. 2004ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಡಿ.ಎಸ್. ವೀರಯ್ಯ ವಾಜಪೇಯಿ ನಾಮಬಲದಿಂದಾಗಿ ಕೆ.ಎಚ್. ಮುನಿಯಪ್ಪನವರಿಗೆ ಕೊಂಚ ಮಟ್ಟಿಗೆ ನಡುಕ ಹುಟ್ಟಿಸಿದ್ದರು. ಆದರೆ, ಬಿಜೆಪಿಯವರೆ ವೀರಯ್ಯನವರ ಕೈಬಿಟ್ಟಿದ್ದರಿಂದ ಸೋಲಬೇಕಾಯಿತು.
2004ರ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಇದ್ದ ಒಟ್ಟು ಮತಗಳು 12,62,765. ಕಾಂಗ್ರೆಸ್ಸಿನ ಕೆ.ಎಚ್. ಮುನಿಯಪ್ಪ 3,85,582 ಮತ ಪಡೆದರೆ ಬಿಜೆಪಿಯ ವೀರಯ್ಯ 3,73,947 ಮತ ಪಡೆದು 11635 ಮತಗಳ ಅಂತರದಿಂದ ಸೋತರು. ಉಳಿದ 5 ಮಂದಿ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದರು.
ಚುನಾವಣಾ ಫಲಿತಾಂಶದ ಬಳಿದ ಕೋಲಾರ ಖಾಲಿ ಮಾಡಿದ್ದರಿಂದ ವೀರಯ್ಯ ಇನ್ನು ಕೋಲಾರ ಕ್ಷೇತ್ರಕ್ಕೆ ಬರಲಾರರು ಎಂದೇ ಭಾವಿಸಲಾಗಿತ್ತು. ಆದರೆ, 2008ರಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆ ಬಳಿಕ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದುಕೊಂಡ ವೀರಯ್ಯ ಕೋಲಾರದಲ್ಲಿ ಮತ್ತೆ ಪ್ರವಾಸ ಆರಂಭಿಸಿ 2009ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. ಜೆಡಿಎಸ್ನಿಂದ ಚಂದ್ರಣ್ಣ ಸ್ಪರ್ಧಿಸದಿದ್ದಲ್ಲಿ ವೀರಯ್ಯ ಕೊಂಚ ಶ್ರಮಿಸಿದಲ್ಲಿ ಗೆಲ್ಲುವುದು ಕಷ್ಟವಿರಲಿಲ್ಲ.
ಕೆ.ಎಚ್. ಮುನಿಯಪ್ಪ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮತ ವಿಭಜನೆಯಾದ್ದರಿಂದ ವೀರಯ್ಯ ವಿರುದ್ಧ 23006 ಮತಗಳ ಅಂತರದಿಂದ ಜಯ ಸಾಧಿಸಲು ಸಹಕಾರವಾಯಿತು. ಈ ಚುನಾವಣೆಯಲ್ಲಿ ಒಟ್ಟು ಮತದಾರರು ಇದ್ದದ್ದು 13,39,856. ಮುನಿಯಪ್ಪ ಪಡೆದ ಮತಗಳು 344771, ವೀರಯ್ಯ ಗಳಿಸಿದ್ದು 321765 ಮತಗಳು. ಜೆಡಿಎಸ್ ಚಂದ್ರಣ್ಣ 2.75 ಲಕ್ಷ ಮತ ಪಡೆದು ವೀರಯ್ಯನವರ ಆಸೆಗೆ ತಣ್ಣಿರು ಎರಚಿದರು.
2014ರಲ್ಲಿ ನಡೆಯುವ 16ನೇ ಲೋಕಸಭಾ ಚುನಾವಣೆಗೆ ಕೆ.ಎಚ್. ಮುನಿಯಪ್ಪ ಕಾಂಗ್ರೆಸ್ಸಿನಿಂದ ಮತ್ತೆ ಸ್ಪರ್ಧಿಸುವುದು ಬಹುತೇಕ ಗ್ಯಾರೆಂಟಿ, ಕಳೆದ ವರ್ಷವೇ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರು ಮುನಿಯಪ್ಪ ಅವರ ಹೆಸರನ್ನು ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ನಿರ್ಣಯ ಕೈಗೊಂಡು ಎಐಸಿಸಿಗೆ ಶಿಫಾರಸು ಮಾಡಿದ್ದಾರೆ.
ಕ್ಷೇತ್ರದಿಂದ ಆರು ಬಾರಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಪ್ರಯತ್ನ ನಡೆಸಿಲ್ಲವೆಂಬ ಆರೋಪಗಳು ಕೇಳಿ ಬಂದಿದ್ದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಗೆಲವಿಗಾಗಿ ಸದ್ದು ಗದ್ದಲವಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಈ ಬಾರಿ ಹೇಗಾದರೂ ಮಾಡಿ ಸಂಸತ್ ಪ್ರವೇಶ ಮಾಡಬೇಕೆಂದು ಕಳೆದ ಮೂರು ತಿಂಗಳಿಂದ ಮತ್ತೆ ಕ್ಷೇತ್ರ ಪ್ರವಾಸ ಆರಂಭಿಸಿರುವ ಬಿಜೆಪಿಯ ವೀರಯ್ಯ ಮುನಿಯಪ್ಪ ಅವರಿಗೆ ರಾಜಕೀಯ ಶತ್ರುವಾಗಿರುವ ಕೋಲಾರ ಶಾಸಕ ಆರ್. ವರ್ತೂರ್ ಪ್ರಕಾಶ್ ಬೆಂಬಲ ಕೋರಿದ್ದಾರೆ.
ಸಭೆ-ಸಮಾರಂಭಗಳಲ್ಲಿ ವರ್ತೂರ್ ಪ್ರಕಾಶ್ ಗುಣಗಾನ ಮಾಡುವ ಮೂಲಕ ಕುರುಬರ ಮತ ಗಳಿಕೆಗೆ ಬಲೆ ಬೀಸಿದ್ದಾರೆ. ಒಂದು ವೇಳೆ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಮುಖಂಡರು ಬಿಜೆಪಿಗೆ ಬಿಟ್ಟುಕೊಟ್ಟರೆ ಮಾಲೂರು ಕ್ಷೇತ್ರದ ಜೆಡಿಎಸ್ ಶಾಸಕರ ಬೆಂಬಲವೂ ಸಿಗುತ್ತದೆ ಎಂಬುದು ವೀರಯ್ಯ ನಿರೀಕ್ಷಿಸುತ್ತಿದ್ದಾರೆ.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವೀರಯ್ಯ ಆ.15 ರಂದು ಕೋಲಾರದ ಸಿ. ಬೈರೇಗೌಡ ಬಡಾವಣೆಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ. ಕಳೆದ ಸಾರಿಯೂ ಇದೇ ಬಡಾವಣೆಯಲ್ಲಿ ಮನೆ ಕಂ ಕಚೇರಿಯನ್ನು ಮಾಡಿದ್ದರು. ವೀರಯ್ಯನವರ ಪರವಾಗಿ ಬಿಜೆಪಿಯ ಕೆಲ ಕಾರ್ಯಕರ್ತರು ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ಇನ್ನು ಆಖಡಕ್ಕೆ ಇಳಿದಿಲ್ಲ.
ಈ ಮಧ್ಯೆ ಬಂಗಾರಪೇಟೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ತಾವು ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದಾಗಿ ಹೇಳಿರುವುದು ಗಮನಿಸಿದರೆ ಬಿಜೆಪಿಯಲ್ಲಿ ಇನ್ನು ವ್ಯತ್ಯಾಸಗಳು ನಿವಾರಣೆ ಆಗಿಲ್ಲವೆಂಬುದು ಗೊತ್ತಾಗುತ್ತಿದ್ದು. ವೀರಯ್ಯ ತಮ್ಮ ಪಕ್ಷದಲ್ಲಿನ ಗೊಂದಲ ನಿವಾರಣೆ ಆಗುವ ಮುನ್ನವೇ ಚುನಾವಣೆಗೆ ತಾಲೀಮು ನಡೆಸಿದ್ದು ಇದು ಎಷ್ಟರ ಮಟ್ಟಿಗೆ ಲಾಭವಾಗಬಹುದು ಎಂದು ಕಾಲವೇ ನಿರ್ಧರಿಸಬೇಕಾಗಿದೆ.
-ಪಾ.ಶ್ರೀ.ಅನಂತರಾಮ್