ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಣುಕಾ ಯಲ್ಲಮ್ಮ ಸಮಾಜ ಜಾಗೃತಿ ಸಮಾವೇಶ ಉದ್ಘಾಟನೆ

Vishwanath S
Updated On : 19 Aug 2013, 12:25 pm

ಬಂಗಾರಪೇಟೆ: ರಾಜ್ಯದಲ್ಲಿ ಸಂಘಟನೆಗಳು ತಮ್ಮ ಜವಾಬ್ದಾರಿಯನ್ನು ಮರೆಯುತ್ತಿವೆ. ಸಮಾಜದಲ್ಲಿ ಶೋಷಣೆಗೆ ಒಳಗಾದವರ ಪರವಾಗಿ ಧ್ವನಿ ಎತ್ತಿದಾಗ ಮಾತ್ರ ಇಂಥ ಸಂಘಟನೆಗಳನ್ನು ಹುಟ್ಟಿಹಾಕಿದ್ದಕ್ಕೆ ಸಾರ್ಥಕವಾಗುವುದು ಎಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.
ತಾಲೂಕಿನ ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿ ರೇಣುಕಾ ಎಲ್ಲಮ್ಮ ಸಮಾಜದಿಂದ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಮಾಜ ಕಾರ್ಯಕರ್ತರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಸಮಾಜದ ಬಂಧುಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು. ಆಗಲೆ ಸಂಘಟನೆ ಸ್ಥಾಪಿಸಿದ್ದಕ್ಕೆ ಸಾರ್ಥಕವಾಗುವುದು ಎಂದರಲ್ಲದೆ ಕೆಲವರು ಸರ್ಕಾರದ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ. ಈ ಪ್ರವೃತ್ತಿಯನ್ನು ತ್ಯಜಿಸಿ ಸಮಾಜದ ಅಭಿವೃದ್ಧಿಗೆ ಕಂಕಣ ತೊಡಬೇಕೆಂದು ಹೇಳಿದರು.
ಸಮಾಜದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ ಮಾತನಾಡಿ ರೇಣುಕಾ ಎಲ್ಲಮ್ಮ ಸಮಾಜದವರು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವುದರಿಂದ ಸಂಘಟನೆಯಲ್ಲಿ ಎಡವಿದ್ದೇವೆ. ಆದ್ದರಿಂದ ಸಮಾಜದವರು ಮೊದಲು ಶಿಕ್ಷಣ ಪಡೆಯಬೇಕು ಮತ್ತು ತಮ್ಮಲ್ಲಿರುವ ಕೀಳರಿಮೆಯನ್ನು ದೂರ ಮಾಡಿ ಸಮಾಜದ ಆಗು ಹೋಗುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕೋರಿದರು.ಇದೇ ವೇಳೆ ಪಿಎಚ್‌ಡಿ ಪಡೆದಿರುವ ಸಮಾಜದ ಡಾ. ಕೋದಂಡರಾಮಯ್ಯ ಮತ್ತು ಡಾ. ಚಂದ್ರಮೋಹನ್‌ರನ್ನು ಸತ್ಕರಿಸಲಾಯಿತು.
ವೇದಿಕೆಯಲ್ಲಿ ಕೆಜಿಎಫ್ ಶಾಸಕಿ ವೈ.ರಾಮಕ್ಕ, ಅಶ್ವತ್ಥಕುಮಾರ್, ಸುಮನಾಗರಾಜ್, ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಹುಲಿಬೆಲೆ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಅ.ನಾ.ಹರೀಶ್, ಕುಚ್ಚಪ್ಪ, ವೆಂಕಟೇಶ್, ಮುನಿವೆಂಕಟಪ್ಪ, ನಾರಾಯಣಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement