ಅನ್ನಭಾಗ್ಯ ಜಾರಿಯಲ್ಲಿ ಇಲಾಖೆ ವಿಫಲ: ರೈತ ಸಂಘ ಆರೋಪ
ಗೌರಿಬಿದನೂರು: ರಾಜ್ಯ ಸರ್ಕಾರ ಒಂದು ರುಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುತ್ತಿರುವುದು ಸ್ವಾಗತಾರ್ಹ. ಆದರೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ಮಾಡುವಲ್ಲಿ ಆಹಾರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಕಾರ್ಯದರ್ಶಿ ಎನ್.ಆರ್. ರವಿಚಂದ್ರರೆಡ್ಡಿ ಆರೋಪಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಮಾತನಾಡಿ, ಶೇ.40ರಷ್ಟು ಅರ್ಹ ಫಲಾನುಭವಿಗಳಿಗೆ ತಾಲೂಕಿನಲ್ಲಿ ಪಡಿತರ ಚೀಟಿ ಈ ಕ್ಷಣಕ್ಕೂ ಸಿಕ್ಕಲ್ಲವೆನ್ನುವುದು ಬಡವರ ದೌರ್ಭಾಗ್ಯ. ಆದ್ದರಿಂದ ಎಲ್ಲಾ ಆರ್ಹ ಫಲಾನುಭವಿಗಳಿಗೆ ಕೂಡಲೇ ಬಿಪಿಎಲ್ ಪಡಿತರ ಚೀಟಿ ನೀಡಬೇಕು, ಅಕ್ಕಿ ಜೊತೆಗೆ ಕೇರಳ ಮಾದರಿಯಂತೆ 14 ದಿನಸಿ ಪದಾರ್ಥಗಳನ್ನು ರಿಯಾಯ್ತಿ ದರದಲ್ಲಿ ನೀಡಬೇಕು ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೂ ಅಕ್ಕಿ ಮತ್ತಿತರ ಆಹಾರ ಪದಾರ್ಥಗಳ್ನು ನೀಡಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹೊಸೂರು ತಿಪ್ಪಣ್ಣ, ಉಪಾಧ್ಯಕ್ಷ ಆರ್.ಎನ್. ರಾಜು, ತಾಲೂಕು ಖಜಾಂಚಿ ಜಗದೀಶ್ ಮಾತನಾಡಿದರು. ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಪ್ರವಾಸ: ರಾಧಾಕೃಷ್ಣ
ಕ.ಪ್ರ.ವಾರ್ತೆ , ಗೌರಿಬಿದನೂರು , ಆ. 19
ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವಕರ್ಮ ಜಯಂತಿ ಬಗ್ಗೆ ವಿಶ್ವಕರ್ಮ ಜನಾಂಗಕ್ಕೆ ಜಾಗೃತಿ ಮೂಡಿಸಲು ರಾಜ್ಯದ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರ ಸೂಚನೆಯಂತೆ ಜಿಲ್ಲಾ ಮತ್ತು ತಾಲೂಕುಗಳಿಗೂ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಂ.ಎನ್. ರಾಧಾಕೃಷ್ಣ ತಿಳಿಸಿದರು.
ಪಟ್ಟಣದ ಬಾಹ್ಮಣರ ಕ್ಷೇಮಾಭ್ಯುದಯ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಅಂಗವಾಗಿ ಜನಾಂಗವನ್ನು ಸಂಘಟಿಸಲು ಈ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯೆ ಪ್ರಮೀಳಾ ರಾಧಾಕೃಷ್ಣ, ಜನಾರ್ದನಾಚಾರಿ, ಮಧುಸೂಚನಾಚಾರ್, ಚನ್ನಕೃಷ್ಣಾಚಾರ್, ಮಲ್ಲಿಕಾರ್ಜುನಾಚಾರ್, ಆನಂದಾಚಾರ್, ಜಯಂತ್ಕುಮಾರ್, ಮುರಳಿ, ಅಕ್ಷಯ್, ಚನ್ನರಾಪಯಪ್ಪ, ವೇಣು ಇದ್ದರು.
ಅಸಮಾಧಾನ
ಚಿಂತಾಮಣಿ: ಕೆಎಸ್ಆರ್ಟಿಸಿ ಚಿಂತಾಮಣಿ ಘಟಕದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ನೌಕರರ ಸಂಘದ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಸಭೆ ಕರೆಯದೆ ಇರುವ ಬಗ್ಗೆ ಹಲವಾರು ಕಾರ್ಮಿಕರು ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ಘಟಕದ ಕಾರ್ಮಿಕರ ಹಿತಾಸಕ್ತಿ ಬಗ್ಗೆ ಸಾಮಾನ್ಯ ಸಭೆ ಕರೆದು ನ್ಯಾಯ ಕಲ್ಪಿಸಲು ಮುಂದಾಗಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ಇಂದು ದೇವರಾಜ ಅರಸು ದಿನಾಚರಣೆ
ಚಿಕ್ಕಬಳ್ಳಾಪುರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆ.20ರಂದು ಹಿಂದುಳಿದ ವರ್ಗಗಳ ಕಾಂತ್ರಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆಡಳಿತ, ಜಿಪಂ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಾ. ಕೆ. ಸುಧಾಕರ್ ವಹಿಸಲಿದ್ದಾರೆ. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪಮೊಯ್ಲಿ, ಕೇಂದ್ರ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವ ಎಚ್. ಮುನಿಯಪ್ಪ, ವಿಧಾನಸಭೆ ಉಪ ಅಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಎಂ. ಕೃಷ್ಣಾರೆಡ್ಡಿ, ಎಂ. ರಾಜಣ್ಣ, ವಿರೋಧ ಪಕ್ಷದ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾವು, ವಿಧಾನ ಪರಿಷತ್ ಸದಸ್ಯರಾದ ಮುಮ್ತಾಜ್ ಅಲಿಖಾನ್, ನಸೀರ್ ಅಹಮದ್, ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ ಮತ್ತು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್, ಜಿಪಂ ಸಿಇಒ ನೀಲಾ ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಿವಪ್ರಸಾದ್ ಪಾಲ್ಗೊಳ್ಳಲಿದ್ದಾರೆ.
ಆಯುಷಾರನ್ನು ಅಮಾನತುಗೊಳಿಸಿ
ಬಂಗಾರಪೇಟೆ: ನನ್ನ ಗಮನಕ್ಕೆ ತರದೇ ತಾಲೂಕಿನ ಬೂದಿಕೋಟೆ ಹೋಬಳಿಯಲ್ಲಿ ಕೋಲಾರ ಉಪ ವಿಭಾಗಾಧಿಕಾರಿ ಆಯುಷಾ ಪರ್ವೀನ್ ಪಿಂಚಣಿ ಅದಾಲತ್ ಹಮ್ಮಿಕೊಂಡು ಶಿಷ್ಟಾಚಾರ ಉಲ್ಲಂಘಿಸಿ ದರ್ಪತನದಿಂದ ಮೆರೆದಿದ್ದಾರೆ. ಅವರನ್ನು ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕ್ಷೇತ್ರದ ಶಾಸಕರಾಗಿರುವ ನನಗೆ ಕ್ಷೇತ್ರದಲ್ಲಿ ಕೈಗೊಳ್ಳುವ ಎಲ್ಲಾ ಸರ್ಕಾರಿ ಯೋಜನೆಗಳನ್ನು ನನ್ನ ಗಮನಕ್ಕೆ ತಂದು ಅಧಿಕಾರಿಗಳು ಅನುಷ್ಠಾನ ಮಾಡಬೇಕು. ಅದನ್ನು ಎಲ್ಲಾ ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಆದರೆ ಕೋಲಾರ ಉಪವಿಭಾಗಾಧಿಕಾರಿ ಆಯುಷಾ ಪರ್ವೀನ್ ಅವರು ಪದೇ ಪದೇ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಾ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಕೂಡಲೇ ಇವರನ್ನು ಅಮಾನತು ಮಾಡಿ ಇಲ್ಲವೇ ಜಿಲ್ಲೆಯಿಂದ ಬೇರೆಡೆ ವರ್ಗಾಯಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಸಕ ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಇಲಾಖೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮಹಿಳಾ ಮಾಲಾಧಾರಿಗಳಿಂದ ಪೂಜೆ
ಮುಳಬಾಗಲು: ಪಟ್ಟಣದ ಮುತ್ಯಾಲಪೇಟೆಯ ಕಾಮಾಕ್ಷಿ ದೇವಾಲಯದ ಬಳಿ ಇರುವ ಓಂ ಶಕ್ತಿ ದೇವಾಲಯದಲ್ಲಿ ಸೋಮವಾರ ಮಹಿಳಾ ಮಾಲಾಧಾರಿಗಳಿಂದ ವಿಶೇಷ ಪೂಜೆ ಸಲ್ಲಿಸಿದರು.
ಗಂಗಮ್ಮ ದೇವಾಲಯಕ್ಕೆ ಪೂರ್ಣ ಕುಂಭಾ ಕಳಶಗಳೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಂತರ ಶಿವಕೇಶವ ನಗರದ ಉದ್ಭವ ಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ನೂರಕ್ಕೂ ಹೆಚ್ಚು ಮಹಿಳೆಯರು ಓಂ ಶಕ್ತಿ ಮಾಲಾಧಾರಣೆ ವೃತ್ತ ಕೈಗೊಂಡಿದ್ದು, ನಂತರ ತಮಿಳುನಾಡಿನ ಓಂ ಶಕ್ತಿ ದೇವಾಲಯಕ್ಕೆ ತೆರಳಿದರು. ವಿಶೇಷ ಭಜನೆ ಕೀರ್ತನೆಗಳ ಬಗ್ಗೆ ರೆಡ್ಡಮ್ಮ, ಆರ್, ಮಂಜುಳ ಮತ್ತು ಪಾರ್ವತಮ್ಮ ವಿವರಿಸಿದರು.
ಕೆರೆ ಕಟ್ಟೆ ತೆರವಿಗೆ ರೈತರ ವಿರೋಧ
ಬಂಗಾರಪೇಟೆ: ಅಗಸನ ಕೆರೆ ಕಟ್ಟೆ ಒತ್ತುವರಿ ತೆರವುಗೊಳಿಸುವಂತೆ ಪ್ರಕರಣ ಹೂಡಿರುವುದನ್ನು ತಾಲೂಕು ಆಡಳಿತ ತಡೆದು ರೈತರಿಗಾಗಿ ಉಳಿಸಬೇಕೆಂದು ಆಗ್ರಹಿಸಿ ಬ್ಯಾಟರಾಯನಹಳ್ಳಿ ಮತ್ತು ಬೋಮ್ಮಾಂಡ್ಲಹಳ್ಳಿ ರೈತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಆದೇಶ ತಡೆ ಹಿಡಿದು ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸಿ ರೈತರಿಗೆ ನ್ಯಾಯ ಕಲ್ಪಿಸಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ಮಾಡಿದರು. ರೈತರಿಂದ ಮನವಿ ಸ್ವೀಕರಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯರಾದ ಲಕ್ಷ್ಮೀನಾರಾಯಣ, ಆರ್. ನಾರಾಯಣರೆಡ್ಡಿ, ನಾರಾಯಣಸ್ವಾಮಿ, ಪಾಪಣ್ಣ, ವಿ. ಗಣೇಶ್, ವೆಂಕಟೇಶಪ್ಪ, ಬಿ.ವಿ. ಗೋಪಾಲಕೃಷ್ಣ, ನಾರಾಯಣಪ್ಪ, ಮಂಜುನಾಥ್ ಮತ್ತಿತರರು ಇದ್ದರು.
ಆಲಂಗೂರು ಪ್ರತಿಮೆ ಕಾಪಾಡಲು ಆಗ್ರಹ
ಮುಳಬಾಗಿಲು: ಮಾಜಿ ಸಚಿವ ದಿ. ಆಲಂಗೂರು ಶ್ರೀನಿವಾಸ್ ಅವರ ಪ್ರತಿಮೆಯು ಉದ್ಘಾಟನೆಗೊಳ್ಳದೆ ಅನಾಥವಾಗಿದ್ದು, ಪ್ರತಿಮೆಗೆ ಹಾನಿ ಆಗುವ ಮುನ್ನವೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಆಲಂಗೂರು ಶ್ರೀನಿವಾಸ್ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಪಟ್ಟಣದ ಸೌಂದರ್ಯ ವೃತ್ತದ ಬಳಿಯ ರಸ್ತೆಯ ಮಧ್ಯೆ ಪ್ರತಿಮೆ ಇಡಲಾಗಿದ್ದು, ಉದ್ಘಾಟನೆಗೆ ಜಿಲ್ಲಾ ಆಡಳಿತ ಅವಕಾಶ ನಿರಾಕರಿಸಿದ್ದರಿಂದ ಪ್ರತಿಮೆಗೆ ಹೊದಿಸಲಾಗಿದ್ದ ಹೊದಿಕೆ ಕಳಚಿಕೊಳ್ಳುತ್ತಿರುವುದರಿಂದ ಪ್ರತಿಮೆಗೆ ಹಾನಿ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಜಿಲ್ಲಾ ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕೋಲಾರ: ಬಲಿಜ ಸಮುದಾಯ ಸಂಘಟಿತರಾಗುವ ಮೂಲಕ ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಆರ್.ಎಲ್. ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಲಕ್ಷ್ಮಯ್ಯ ಸಲಹೆ ನೀಡಿದರು. ನಗರದ ಕಠಾರಿಪಾಳ್ಯದಲ್ಲಿರುವ ಶ್ರೀವೇಣುಗೋಪಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ಶ್ರೀವೇಣುಗೋಪಾಲ ದೇವಸ್ಥಾನದ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಉಮಾಶಂಕರ ಮೆಮೋರಿಯಲ್ ಹೆಲ್ತ್ ಸರ್ವೀಸ್ ಟ್ರಸ್ಟ್ ಆಯೋಜಿಸಿದ್ದ ಬಲಿಜ ಜನಾಂಗದ ಹಿರಿಯ ನಾಗರಿಕರಿಗೆ, ನಗರಸಭಾ ಸದಸ್ಯರಿಗೆ ಮತ್ತು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರತಿಭಾ ಪುರಸ್ಕಾರಗಳಿಂದ ಜನಾಂಗದ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸ್ಥಾನಕ್ಕೇರಲು ಉತ್ತೇಜನ ನೀಡಿದಂತಾಗುತ್ತದೆ, ಕೋಲಾರ ನಗರದಲ್ಲಿ ಬಲಿಜ ಸಂಘದ ಟ್ರಸ್ಟ್ಗೆ ಸಾಕಷ್ಟು ಭೂಮಿ ಇದ್ದು ಇದು ಐದಾರು ದಶಕಗಳಿಂದಲೂ ಹಾಗೆಯೇ ಉಳಿದುಕೊಂಡಿವೆ, ಈ ಜಾಗವನ್ನು ಜನಾಂಗದ ಅಭಿವೃದ್ಧಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಮುಖಂಡರು ಮಂದಾಗಬೇಕು, ಇದಕ್ಕಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಜನಾಂಗದಿಂದಲೇ ಕ್ರೋಢೀಕರಿಸಬೇಕೆಂದು ಸಲಹೆ ನೀಡಿದರು. ಜಿಲ್ಲಾ ಬಲಿಜ ಜನಾಂಗದ ಗೌರವಾಧ್ಯಕ್ಷ ಹಾಗೂ ಕೋಲಾರ ನಗರಸಭೆ ಮಾಜಿ ಅಧ್ಯಕ್ಷ ಸಾಮಾರಂಗಪ್ಪ ಮಾತನಾಡಿ, ಮಾನವರಾಗಿ ಹುಟ್ಟಿರುವ ನಾವುಗಳು ನಮ್ಮ ಜೀವನವನ್ನು ಸಾರ್ಥಕ ಸಾಧನೆ ಮೂಲಕ ಮನುಕುಲಕ್ಕೆ ಕೊಡುಗೆ ನೀಡಲು ಪಣ ತೊಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಶ್ರೀಕೈವಾರ ತಾತಯ್ಯನವರ ಬಳೆಗಳನ್ನು ತೊಡಿಸುವ ಕಾರ್ಯಕ್ರಮ, ಅನ್ನ ಸಂತರ್ಪಣೆ, ಕೈವಾರ ನಾರೇಯಣ ತಾತನವರ ಮೂರ್ತಿಯ ರಥೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೆಯುಡಿಎ ಮಾಜಿ ಅಧ್ಯಕ್ಷ ಕೆ.ಎನ್. ರವೀಂದ್ರಕುಮಾರ್, ನಗರಸಭಾ ಸದಸ್ಯರಾದ ಸುಕುಮಾರ್, ನಾರಾಯಣಮ್ಮ, ರೌತ್ ಶಂಕರಪ್ಪ, ಸಿ.ಎಸ್.ಅಶ್ವತ್ಥನಾರಾಯಣ, ಎಸ್.ವಿ. ಕೃಷ್ಣಪ್ಪ, ಎಂ.ವಿ.ನಾರಾಯಣಸ್ವಾಮಿ, ಡಿ.ಎಚ್. ಅಶ್ವತ್ಥನಾರಾಯಣ, ಎನ್. ನಾರಾಯಣಪ್ಪ, ಕಾನಾಲು ತಿಪ್ಪಯ್ಯ, ಜಿ.ಗೋವಿಂದಪ್ಪ, ಎಂ.ಎನ್. ಶ್ರೀನಿವಾಸ್, ಪಿ.ಎನ್. ಗೋವಿಂದಗೌಡ, ಎ. ದೇವಪ್ರಕಾಶ್, ಎಸ್.ಆರ್. ಸುಭಾಷ್, ಡಿ.ಎನ್. ಹರಿನಾಥ್, ಆರ್.ವಿ. ರಾಜೇಶ್, ಎಲ್. ನರಸಿಂಹಮೂರ್ತಿ, ಎಸ್.ಆರ್. ಪ್ರಸನ್ನಕುಮಾರ್ ಇದ್ದರು.
ಅಪರಿಚಿತ ವೃದ್ಧ ಅನುಮಾನಾಸ್ಪದ ಸಾವು
ಚಿಂತಾಮಣಿ: ಹೋಟೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಪರಿಚಿತ ವೃದ್ಧನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಪಟ್ಟಣದ ಚೇಳೂರು ರಸ್ತೆ ಬಳಿ ಭಾನುವಾರ ರಾತ್ರಿ ನಡೆದಿದೆ. ಪಟ್ಟಣದ ಚೇಳೂರು ರಸ್ತೆ ಬಳಿ ಇರುವ ವುಡ್ಲ್ಯಾಂಡ್ಸ್ ಬಳಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ಅಪರಿಚಿತ ವೃದ್ಧ(50) ಅನುಮಾನಾಸ್ಪದ ರೀತಿಯಲ್ಲಿ ರಸ್ತೆ ಬದಿಯಲ್ಲಿ ಮೃತಪಟ್ಟಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಮೂಲತಃ ಆಂಧ್ರಪ್ರದೇಶದ ಹೈದರಾಬಾದ್ ನಿವಾಸಿ ಎಂದು ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಇಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಅಪಘಾತ; ಬೈಕ್ ಸವಾರ ಸಾವು
ಶಿಡ್ಲಘಟ್ಟ: ಟಾಟಾ ಎಸಿ ವಾಹನವೂ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಎಚ್ ಕ್ರಾಸ್ ಬಳಿ ನಡೆದಿದೆ.
ಚಂದ್ರಶೇಖರ(30) ಮೃತ ದುರ್ದೈವಿ. ಚಂದ್ರಶೇಖರ ಶಿಡ್ಲಘಟ್ಟದ ನಿವಾಸಿಯಾಗಿದ್ದು, ಹಂದಿಗಳ ವ್ಯಾಪಾರಕ್ಕೆ ತೆರಳಿದ್ದು ಬರುವಾಗ ಅಪಘಾತ ಸಂಭವಿಸಿದೆ. ವಿಜಯಪುರದ ಕಡೆಯಿಂದ ಬರುತ್ತಿದ್ದ ಟಾಟಾ ಎಸಿ ವಾಹನ(ಕೆಎ 40- 9115) ಎಚ್ ಕ್ರಾಸ್ನಿಂದ ಬರುತ್ತಿದ್ದ ಚಂದ್ರಶೇಖರ ಬೈಕ್(ಕೆಎ 03 ಇಡಿ- 8102)ಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಾಟಾ ಎಸಿ ವಾಹನ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.
ಇಂದು ಅರಸು ಜನ್ಮ ದಿನಾಚರಣೆ
ಕೋಲಾರ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 98ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಮಂಗಳವಾರ ಬೆಳಿಗ್ಗೆ 11ಗಂಟೆಗೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಚರಿಸಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಎಚ್.ಮುನಿಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಶಾಸಕ ಆರ್. ವರ್ತೂರು ಪ್ರಕಾಶ್ ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಇಂದು ಪ್ರತಿಭಟನೆ
ಕೋಲಾರ: ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಮರಳು ಮತ್ತು ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಆ.20 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ತಿಳಿಸಿದ್ದಾರೆ.