ತಹಸೀಲ್ದಾರ್ ಕಚೇರಿಗೆ ಕರವೇ ಮುತ್ತಿಗೆ
ಮಾಲೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರವಾಗಿ ಕಾಡುತ್ತಿರುವ ಮೂಲ ಸೌಲಭ್ಯ ಕೊರತೆ ಹಾಗೂ ಖಾಲಿ ಇರುವ ಡಿ ಗ್ರೂಪ್ ಸಿಬ್ಬಂದಿ ನೇಮಕ ಶೀಘ್ರವಾಗಿ ಮಾಡಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ತಾಲೂಕಿನಾದ್ಯಂತ ಇರುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಸೇರಿದಂತೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರ ಕೊರತೆ ತೀವ್ರವಾಗಿ ಕಾಡುತ್ತಿದ್ದರೂ ಇದುವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಅಥವಾ ತಾಲೂಕು ಆಡಳಿತ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ ಎಂದರು.
ತಾಲೂಕಿನಲ್ಲಿ ಚಿಕೂನ್ ಗುನ್ಯಾ, ಡೆಂಘೀ ಜ್ವರವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದ ರೈತಾಪಿ ಜನ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ದುಸಾಧ್ಯವಾಗಿದೆ. ಅಲ್ಲದೇ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರ ಕೊರತೆಯಿಂದ ಶುಚಿತ್ವದ ಕೊರತೆ ಕಾಡುತ್ತಿದ್ದು, ಆಸ್ಪತ್ರೆಯು ರೋಗಗಳನ್ನು ಉತ್ಪಾದಿಸುವ ಕೇಂದ್ರಗಳಾಗುತ್ತಿದೆ ಎಂದು ಆಪಾದಿಸಿದರು.
ಈ ಕೂಡಲೇ ತಾಲೂಕು ಆಡಳಿತ, ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕಿಸಿ ಆಸ್ಪತ್ರೆ ಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಜೊತೆಯಲ್ಲಿ ಖಾಲಿ ಇರುವ ವೈದ್ಯ ಹಾಗೂ ಸಿಬ್ಬಂದಿ ನೇಮಕ ಮಾಡಬೇಕಾಗಿ ಮನವಿ ಮಾಡಿದರು. ಮನವಿ ಪತ್ರವನ್ನು ಶಿರಸ್ತೆದಾರ ಶ್ರೀನಿವಾಸ್ ಗುಪ್ತ ಅವರಿಗೆ ನೀಡಿದರು.
ಪುರಸಭೆ ಸದಸ್ಯ ಮುರಳೀಧರ್, ಎಸ್.ಎಂ. ರಾಜು,ಬಿ.ಎಸ್. ಮಂಜುನಾಥ್, ರವಿಕುಮಾರ್, ವೆಂ. ಪ್ರಸನ್ನಕುಮಾರ್, ನವೀನ್, ಚೆನ್ನಕೃಷ್ಣ, ಆಟೋ ಮಂಜು, ನಾರಾಯಣ್, ಚಲಪತಿ, ಪಟೇಲ್, ಅಮೀರ್, ಲತಾಬಾಯಿ, ಅನಂತಲಕ್ಷ್ಮಿ, ಗೀತಾ ಇದ್ದರು.